ಸ್ಟೇಟಸ್ ಕತೆಗಳು (ಭಾಗ ೩೪೩) - ಬದಲಾಗಿದೆ ಊರು

ಸ್ಟೇಟಸ್ ಕತೆಗಳು (ಭಾಗ ೩೪೩) - ಬದಲಾಗಿದೆ ಊರು

ನಾನು ನನ್ನ ಊರಿಗೆ ಕಾಲಿಡದೆ ಕೆಲವು ವರ್ಷಗಳೇ ಸಂದಿವೆ. ಅಂದು ಬಸ್ಸನ್ನು ಏರಿದವ ಇಂದು ಬಸ್ಸಿಳಿದಿದ್ದೇನೆ. ಅಂದು ಹರಿಯುತ್ತಿದ್ದ ಹೊಳೆ, ಇಲ್ಲಿದ್ದ ಕಾಡು, ಗದ್ದೆ ತೋಟಗಳು, ಪ್ರಾಣಿ-ಪಕ್ಷಿಗಳು ಎಲ್ಲವೂ ಹಾಗೇ ಇದ್ದಾವೆ. ಏನೋ ಬದಲಾಗಿಲ್ಲ. ಆದರೆ ನಾನು ನೋಡಿದ್ದ ಜನರು ಇವರೆಲ್ಲ. ಇವರೆಲ್ಲ ಬೇರೆ ಊರಿನಿಂದ ಬಂದವರು ಅಂತ ಕಾಣುತ್ತದೆ, ಯಾಕೆಂದರೆ ಇಲ್ಲಿಯವರೆಗೆ ನಡೆದ ಘಟನೆಗಿಂತ ಹೋದ ಜೀವಕ್ಕಿಂತ ಚರ್ಚೆಗಳೇ ದೊಡ್ಡ ಮಟ್ಟಕ್ಕಿಳಿದು ಬಿಡುತ್ತಿವೆ .ನಮಗೆ ಉಪಯೋಗವಿಲ್ಲದಿದ್ದರೆ, ನಮ್ಮವರೇ ತಪ್ಪು ಮಾಡಿದರೂ ಕೂಡ ಅದನ್ನ ಖಂಡಿಸುವುದಕ್ಕೆ ಹೋಗೋದಿಲ್ಲ. ವ್ಯಕ್ತಿ ಸತ್ತದ್ದು ಹೇಗೆ ವ್ಯಕ್ತಿಯ ಸಾವಿಗಿಂತ ಸಾವಿಗೆ ಉಂಟಾದ ಕಾರಣವೇ ದೊಡ್ಡ ವಿಚಾರ ಚರ್ಚೆಗೆ ಕಾರಣವಾಗುತ್ತಿದೆ. ನೆಲದ ಸಂಸ್ಕೃತಿಯನ್ನೇ ಮರೆತು ತಮ್ಮದೇ ಹೊಸ ವಿಧಾನಗಳನ್ನು ಅಳವಡಿಸುವ ಮನಸ್ಸುಗಳು ಹೆಚ್ಚಾಗಿವೆ. ಇದು ನಮ್ಮೂರಲ್ಲ ನಾನು ಹೋಗುವಾಗ ಹೀಗಿರಲಿಲ್ಲ ಅದಲ್ಲದೆ ಈ ಊರಿನ ಎಲ್ಲ ಹೂಗಿಡಗಳು ಉಸಿರು ನೀಡೋ ಮರಗಳು ಊರು ಬಿಟ್ಟು ಹೊರಡೋಕೆ ತಯಾರಾಗಿ ಬಿಟ್ಟಿದ್ದಾರೆ? ಯಾಕೆ ಅಂತ ಕೇಳಿದ್ರೆ "ನಿಮ್ಮ ಜಗಳ ಕಚ್ಚಾಟ ಮನಸ್ಸಿನಿಂದ ಹೊರಡುತ್ತಿರುವ ಕೆಟ್ಟ ವಾಸನೆಯಿಂದ ನಮಗೆ ಬದುಕೋಕಾಗಲ್ಲ. ನಿಮ್ಮ ಮನಸ್ಸಿನ ವಾಸನೆಯನ್ನು ದೂರ ಮಾಡುವಷ್ಟು ಗಂಧ ನಮ್ಮಲ್ಲಿಲ್ಲ ನೀವೇ ಉಸಿರುಗಟ್ಟಿ ಕೊಂಡು ಸಾಯುವಾಗ ನಮ್ಮ ಉಸಿರು ನಿಮಗೇಕೆ ಹಾಗಾಗಿ ನಿಮ್ಮ ಬದುಕನ್ನ ನೀವೇ ನೋಡಿಕೊಳ್ಳಿ ನಾವು ಕಾಡೊಳಗೆ ಬದುಕುತ್ತೇವೆ ಅಂತ ಹೊರಟು ಹೋಗುತ್ತಿವೆ. ನನ್ನೂರು ಹೀಗೆ ಬದಲಾಗುವುದಕ್ಕೆ ಕಾರಣ ಏನು ಅಂತ ಗೊತ್ತಾಗ್ತಾ ಇಲ್ಲ ಪರಿಸ್ಥಿತಿ ಕೆಟ್ಟದ್ದು ಆದರೆ ನಾನು ಊರು ಬಿಡಬೇಕಾಗುತ್ತದೆ …

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ