ಸ್ಟೇಟಸ್ ಕತೆಗಳು (ಭಾಗ ೩೪೪) - ಮ್ಯಾನರ್ಸ್
ಬಸ್ಸು ಸ್ವಲ್ಪ ಜಾಸ್ತಿಯೇ ತುಂಬಿತ್ತು. ಸಂಜೆ ಹೊತ್ತು ಮನೆಗೆ ತೆರಳುವವರು ಹೆಚ್ಚಿದ್ದರು. ಕುಳಿತುಕೊಳ್ಳೋಕೆ ಸೀಟೂ ಸಿಗಲಿಲ್ಲ. ಹಾಗಾಗಿ ಕಂಬವನ್ನು ಹಿಡಿದುಕೊಂಡು ನಿಂತಿದ್ದೆ. ಮುಂದಿನ ಸೀಟಿನಲ್ಲಿ ಕುಳಿತಿದ್ದ ಮಹಾನುಬಾವರೊಬ್ಬರು ಪಕ್ಕದಲ್ಲಿದ್ದವರ ಬಳಿ ಮಾತಾಡ್ತಾ "ನೋಡಿ ಸಾರ್, ಈ ಹಳ್ಳಿ ಜನ ಇರ್ತಾರಲ್ಲ, ಅವರಿಗೆ ಒಂದು ಚೂರು ಮ್ಯಾನರ್ಸ್ ಅನ್ನೋದು ಇರೋದಿಲ್ಲ. ಎಲ್ಲಿ ಮಾತಾಡಬೇಕು, ಹೇಗೆ ಮಾತಾಡಬೇಕು, ಯಾವ ತರದ ಬಟ್ಟೆ ಹಾಕೋಬೇಕು ಅನ್ನಿದರ ಅರಿವಿರೋದಿಲ್ಲ." ಇವರು ಇಷ್ಟು ದೊಡ್ಡ ಭಾಷಣ ಬಿಗಿಯೋದಕ್ಕೆ ಕಾರಣವೇನೆಂದರೆ ಅವರಿಗಿಂತ ಹಿಂದೆ ಕೂತಿದ್ದವರು ಬೆಳಗ್ಗಿನಿಂದ ಸಂಜೆಯವರೆಗೂ ಬೆವರುಹರಿಸಿ ಮಣ್ಣಿನ ಕೆಲಸ ಮಾಡಿ ಬಂದವರು, ಜೋರು ಸ್ವರದಲ್ಲಿ ಮನೆಯವರ ಜೊತೆ ಮಾತನಾಡುತ್ತಿದ್ದರು. ಅವರು ಮೊಬೈಲ್ ಹಿಡಿದಿರುವುದನ್ನು ನೋಡಿದರೆ ಅವರಿಗೆ ಅದರ ಬಳಕೆಯ ಬಗ್ಗೆ ಸಂಪೂರ್ಣ ಅರಿವಿಲ್ಲ ಅನ್ನೋದು ತಿಳಿಯುತ್ತಿತ್ತು. ಈ ಮ್ಯಾನರ್ಸ್ ಬಗ್ಗೆ ಭಾಷಣ ಮಾಡಿದವರ ಮಾತು ಇನ್ನೂ ಬೆಳೆಯಿತು, "ಎಲ್ಲಿ ಹೇಗೆ ವರ್ತಿಸಬೇಕು ಅನ್ನುವುದರ ಅರಿವಿಲ್ಲದವರು ಅದೇನು ಸಮಾಜಕ್ಕೆ ಕೊಡುಗೆ ಕೊಡುತ್ತಾರೋ ಗೊತ್ತಿಲ್ಲ .ಅದಕ್ಕೆ ಹೇಳೋದು ಶಿಕ್ಷಣ ಬೇಕು. ಆಗ ಎಲ್ಲವೂ ತಿಳಿಯುತ್ತದೆ" ಎಂದವರು ತಾನು ಜಗಿಯುತಿದ್ದ ಗುಟ್ಕಾವನ್ನು ಉಗುಳೋದಕ್ಕೆ ಕಿಟಕಿಯಿಂದ ತಲೆ ಹೊರಗೆ ಹಾಕಿದರು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ