ಸ್ಟೇಟಸ್ ಕತೆಗಳು (ಭಾಗ ೩೪೬) - ಹಸಿವು

ಸ್ಟೇಟಸ್ ಕತೆಗಳು (ಭಾಗ ೩೪೬) - ಹಸಿವು

ಹಸಿವಿನ ತೀವ್ರತೆಯೂ ಬದುಕಿನ ಬಂಡಿಯೂ ಎರಡೂ ಜೊತೆಯಾಗಿ ಸಾಗುವುದನ್ನು ಇವತ್ತು ಗಮನಿಸಿದೆ. ನಾನು ಕುಳಿತ ಮುಂದಿನ ಟೇಬಲ್ ನಲ್ಲಿ ಅವರಿಬ್ಬರೂ ಬಂದು ಕುಳಿತಿದ್ದರು. ಸಂಜೆ ಕೆಲಸ ಮುಗಿಸಿ ಬಂದಿರುವ ಸುಸ್ತು ಅವರ ಮುಖದಲ್ಲಿ ಕಾಣುತ್ತಿತ್ತು. ಹೋಟೆಲಿಗೆ ಬಂದಿದ್ದಾರೆ ಅಂದ್ರೆ ಅವರು ತಮ್ಮ ಮನೆಯಿಂದ ಬಂದಿರುವುದಲ್ಲ. ಎಲ್ಲೋ ಒಂದು ಕಡೆ ಇವರಿಬ್ಬರೇ ಬದುಕಲಿಕ್ಕೆ ಸಾಗುವಂತ ಸಣ್ಣ ವ್ಯವಸ್ಥೆ ಮಾಡಿಕೊಂಡಿದ್ದಾರೆ ಅನ್ನಿಸುತ್ತದೆ. ತುಂಬಾ ಸಮಯದ ನಂತರ ಹೋಟೆಲಿನ ಒಳಗೆ ಪ್ರವೇಶಿಸಿದ್ದಾರೆ ಅನ್ನೋದು ಅವರ ಮುಖಭಾವ ತಿಳಿಸುತ್ತಿತ್ತು .ಇಬ್ಬರಿಗೂ ತಿನ್ನಬೇಕಾದ ಪದಾರ್ಥಗಳು ಪಟ್ಟಿ ತುಂಬ ದೊಡ್ಡದಿತ್ತು ಆದರೆ ಕಿಸೆಯಲ್ಲಿದ್ದ ದುಡ್ಡು ಮಾತನಾಡಲು ಬಿಡುತ್ತಿರಲಿಲ್ಲ. ಕಿಸೆಯಲ್ಲಿರುವ ದುಡ್ಡು ಬರಿಯ ಊಟಕ್ಕಲ್ಲ, ಊರಲ್ಲಿರುವ ಮನೆಯವರ ಬದುಕಿಗೂ ಬೇಕಾಗುತ್ತಿದೆ. ಅವರ ದುಡಿಮೆಯ ಒಂದು ಸಣ್ಣ ಅಂಶದ ದುಡ್ಡನ್ನ ಟೇಬಲ್ ಮೇಲೆ ಇಟ್ಟು ಅದಕ್ಕೆ ಏನು ತೆಗೆದುಕೊಳ್ಳಬಹುದು ಅನ್ನೋದನ್ನ ಅವರಿಬ್ಬರೇ ಮಾತಾಡಿಕೊಂಡರು. ಸರ್ವರ್  ಒಂದಷ್ಟು ಉದ್ದದ  ಪಟ್ಟಿ ಹೇಳಿದರು. ಅದು ಒಬ್ಬರಿಗೆ ಮಾತ್ರ ಸಿಗುವುದು.ಹಂಚಿ ತಿನ್ನುವ ನಿರ್ಧಾರ ಮಾಡಿದರು. ಟೇಬಲ್ಲಿಗೆ ಇಟ್ಟ ಕ್ಷಣಗಳಲ್ಲಿ ಎಲ್ಲವೂ ಖಾಲಿಯಾಗಿತ್ತು. ಆದರೂ ಇಬ್ಬರೂ ಕೊನೆಯ ಎರಡು ತುಂಡುಗಳನ್ನು ಇಟ್ಟುಕೊಂಡು ಮತ್ತೊಂದಷ್ಟು ಸಾಂಬಾರನ್ನು ಕೇಳಿ ಪಡೆದು ಅದನ್ನೇ ಕುಡಿದರು. ಇದನ್ನು ಗಮನಿಸಿದ ಹೋಟೆಲ್ ಮಾಲೀಕರಿಗೆ ಬಂದವರನ್ನ ಅರ್ಧ ಹೊಟ್ಟೆಯಲ್ಲಿ ಕಳಿಸುವ ಮನಸಾಗದೆ ಎರಡು ಭರ್ಜರಿ ಊಟವನ್ನು ಅವರ ಕಡೆಯಿಂದ ಕೊಟ್ಟು ಸುಮ್ಮನೆ ನಗುತ್ತಾ ನಿಂತರು. ಕಣ್ಣಂಚಲ್ಲಿ ನೀರು ಇಳಿಸುತ್ತಾ ಹೊಟ್ಟೆ ತುಂಬಾ ಊಟ ಮಾಡಿ ನಿಗದಿಪಡಿಸಿದ ದುಡ್ಡುಕೊಟ್ಟು ಕೈಮುಗಿದುಕೊಂಡು ಹೊರಟುಬಿಟ್ಟರು. ನಾನು ತಿನ್ನುವುದಕ್ಕೆ ಹೇಳಿದ ದೊಡ್ಡ  ಪಟ್ಟಿಯನ್ನು ಕ್ಯಾನ್ಸಲ್ ಮಾಡಿ ಹೊಟ್ಟೆಗೇನು ಬೇಕು ಅದನ್ನ ಮಾತ್ರ ತಿಳಿಸಿ ತಿಂದು ಹೊರನಡೆದೆ. ಬದುಕು ತುಂಬಾ ಹತ್ತಿರದಿಂದ ದೊಡ್ಡ ಪಾಠವನ್ನು ಹೇಳಿಕೊಟ್ಟು ಹೋಗಿತ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ