ಸ್ಟೇಟಸ್ ಕತೆಗಳು (ಭಾಗ ೩೪೭) - ಅವನು

ಸ್ಟೇಟಸ್ ಕತೆಗಳು (ಭಾಗ ೩೪೭) - ಅವನು

ಅವನು ಹೇಗಿರುತ್ತಾನೆ ? ಅನ್ನೋ ಯೋಚನೆ ತಲೆಯೊಳಗೆ ಓಡುತ್ತಾನೆ ಇತ್ತು. ಬಸ್ಸು ಘಾಟಿಯನ್ನು ಇಳಿತಾ ಇರುವಾಗ ಅವನ ತಲೆಯೊಳಗೆ ಆಲೋಚನೆಗಳು ಏರುತ್ತಾ ಇರಬಹುದು. ಯಾಕೆಂದರೆ ಅವನಿಗೆ ಆಗಷ್ಟೇ ಮನೆಯಿಂದ ಕರೆಯೊಂದು ಬಂದಿತ್ತು. ನಿನ್ನ ತಂದೆ ಐಸಿಯುನಲ್ಲಿದ್ದಾರೆ ಇದು ಭಯಪಡುವ ಯೋಚನೆಯೇ. ಆದರೆ ಅದಕ್ಕಿಂತಲೂ ಹೆಚ್ಚು ಭಯಕೊಡುವಂತಹುದು ತಂದೆಯ ಎರಡೂ ಕಿಡ್ನಿಗಳೂ ಕೂಡ ಫೈಲ್ ಆಗಿದ್ದಾವೆ. ಹಾಗಾದರೆ ಮುಂದೇನು? ಪರಿಸ್ಥಿತಿಗಳನ್ನು ನಿಭಾಯಿಸುವುದು ಹೇಗೆ ? ಮನೆಯೊಂದು ಅರ್ಧದಲ್ಲಿ ಕಟ್ಟಿ ನಿಂತುಬಿಟ್ಟಿದೆ. ತೋಟದಲ್ಲಿರುವ ಅಡಿಕೆ ಗಿಡಕ್ಕೆ ಸರಿಯಾದ ಗೊಬ್ಬರ ಹಾಕಬೇಕಾಗಿದೆ. ಸಿಗೋ ಸಂಬಳ ಅಲ್ಲಿಗಲ್ಲಿಗೆ ಸಾಕಾಗುತ್ತದೆ. ಇಷ್ಟೆಲ್ಲಾ ಆಲೋಚನೆಗಳ ನಡುವೆ ಆತನ ಮನಸ್ಸು ಆತನಿಗೆ ಒಪ್ಪಿಸಿದ ಜವಾಬ್ದಾರಿಗಳನ್ನು ನಿಭಾಯಿಸುತ್ತಿದೆ. ಒಂದಷ್ಟು ಜನರಿಗೆ ಕರೆ ಮಾಡಿ ಆಗಬೇಕಾದ ಕೆಲಸವನ್ನು, ಹಿಂದೆ ಅರ್ಧದಲ್ಲಿ ನಿಲ್ಲಿಸಿದ ಕೆಲಸಗಳಿಗೆ ಮುಂದುವರಿಸುವ  ದಾರಿ ಹೇಳುತ್ತಿದ್ದಾನೆ. ಯಾರೊ ಒಬ್ಬರೂ ನನಗೊಂದಷ್ಟು ಸಹಾಯ ಬೇಕು ಅಂತ ಹೇಳಿದ್ದಕ್ಕೆ ಯಾವತ್ತಿಗೆ ಬೇಕು? ಎಂದು ಧೈರ್ಯದಿಂದ ಕೇಳುತ್ತಿದ್ದಾನೆ. ಮುಂದಾಗುವ ಘಟನೆಗಳಿಗೆ ಹೇಗೆ ಪ್ರತಿಕ್ರಿಯಿಸಲಿ ಅನ್ನುವ ಯೋಚನೆಗಳನ್ನು ಕೂಡ ಮಾಡುತ್ತಿಲ್ಲ. ಇಷ್ಟೆಲ್ಲಾ ಮನಸ್ಸಿನಲ್ಲಿ ಆಲೋಚನೆಗಳು ಓಡುತ್ತಿರುವಾಗ ಅವನು ಹೇಗೆ ನಗುತ್ತಾ ಆರಾಮವಾಗಿ ಎಲ್ಲರಂತೆ ಬದುಕುತ್ತಿದ್ದಾನೆ. ನಾನದನ್ನು ಕೇಳಿದ್ದಕ್ಕೆ ಅವನ ಉತ್ತರ ಇಷ್ಟೇ "ಈಗ ನಾನು ಏನು ಆಲೋಚನೆ ಮಾಡಿದರು ನಡೆಯಬೇಕಾದ್ದು ನಡೆಯುತ್ತದೆ. ಬದುಕು ನಾವಂದುಕೊಂಡಂತೆ ಅಲ್ಲ. ಬದುಕು ಸಾಗಿದಂತೆ ಬದುಕಬೇಕು. ನಮ್ಮ ಪ್ರಯತ್ನಪಡಬೇಕು ಮುಂದಾಗುವುದರ ಯೋಚನೆಯಲ್ಲಿ ವರ್ತಮಾನವನ್ನು ಕಳೆದುಕೊಂಡರೆ ನಮಗೆ ನಷ್ಟ ಜಾಸ್ತಿ. ಸದ್ಯಕ್ಕೆ ಬದುಕುತ್ತಿದ್ದೇನೆ ಹೀಗೆಂದು ಬಸ್ಸಿಳಿದು ನಡೆದೇಬಿಟ್ಟ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ