ಸ್ಟೇಟಸ್ ಕತೆಗಳು (ಭಾಗ ೩೪೮) - ಬದುಕು

ಸ್ಟೇಟಸ್ ಕತೆಗಳು (ಭಾಗ ೩೪೮) - ಬದುಕು

"ಎಷ್ಟು ದಿನ ಅಂತ ಇಲ್ಲೇ ಇರ್ತೀರಾ ಮಕ್ಕಳಿರೋ ಕಡೆಗೆ ಹೋಗಿ ಅಲ್ವಾ"

" ನೀನು ಹೇಳ್ತಿಯಾ ,ಆದರೆ ಹುಟ್ಟಿದ ಊರನ್ನು, ಬೆಳೆದ ಊರನ್ನು, ನಂಬಿದ ಪರಿಸರವನ್ನು, ಬದುಕು ಕಟ್ಟಿಕೊಂಡ ಜಾಗವನ್ನು ಬಿಟ್ಟು ಪರಿಚಯವೇ ಇರದ ಜಾಗದಲ್ಲಿ ಬದುಕುವುದಾದರೂ ಹೇಗೆ?".

"ಆದರೆ ನಿಮಗೆ ವಯಸ್ಸಾಗ್ತಾ ಬಂತು. ಈಗ ನಿಮ್ಮ ಜೊತೆ ಮಕ್ಕಳಿರಬೇಕು ಅನಿಸುವುದಿಲ್ಲವಾ? ಮಕ್ಕಳಿಗೆ ಇಲ್ಲಿ ಬಂದಿರೋಕೆ  ಹೇಳಿ"

"ಅದು ಹೇಗೆ ಸಾಧ್ಯವಾಗುತ್ತೆ. ಪ್ರತಿಯೊಬ್ಬರೂ ಒಂದೊಂದು ಜಾಗದಲ್ಲಿ ಬದುಕನ್ನ ಕಟ್ಟಿಕೊಳ್ಳುತ್ತಾರೆ. ಮಕ್ಕಳಿಗೆ ಅಲ್ಲಿ ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಈಗ ಅದನ್ನು ಬಿಟ್ಟು ನಾನು ಇರುವಲ್ಲಿಯೇ ಬದುಕು ಕಟ್ಟಿಕೊಳ್ಳಿ ಅನ್ನೋದು 

ಸರಿಯಲ್ಲ. ಜೊತೆಗೆ ಅವರ ಅರಿವಿಗೆ ಅವರ ಯೋಚನೆಗೆ ಸರಿಯಾದ ಊರು ನಮ್ಮದಲ್ಲ ಹಾಗಾಗಿ ಅವರು ಅಲ್ಲೇ ಇದ್ದಾರೆ. ನಾವು ಅಲ್ಲಿ ಹೋಗಿ ಅವರ ಜೊತೆ ಬದುಕಬೇಕು ಅನ್ನೋದು ಅವರ ಆಸೆ. ಆದರೆ ನನ್ನ ನಂಬಿ ಇಲ್ಲಿ ಹಲವಾರು 

ಅಡಿಕೆ ಗಿಡಗಳು ಬೆಳೆದು ನಿಂತಿದ್ದಾವೆ, ದನಗಳು ಕೊಟ್ಟಿಗೆಯಲ್ಲಿ ಅಂಬಾ ಅಂತ ಕರಿಯುತ್ತಾವೆ, ಒಂದಷ್ಟು ಮನೆಯವರು ಇಲ್ಲಿಗೆ ಕೆಲಸಕ್ಕೆ ಬಂದು ಜೀವನ ದೂಡುತ್ತಿದ್ದಾರೆ, ಹಾಗಿರುವಾಗ ನಾನು ಈ ಊರನ್ನು ಬಿಟ್ಟು ಅಲ್ಲಿ ಹೋಗೋಕಾಗಲ್ಲ. ಮಕ್ಕಳು ಅಲ್ಲಿರುವ ಜಾಗವನ್ನು ಬಿಟ್ಟು ನನ್ನ ಜೊತೆ ಬದುಕೋಕಾಗಲ್ಲ. ಆಗಾಗ ಬರಬೇಕು ಖುಷಿ ಹಂಚಿಕೊಳ್ಳಬೇಕು ಮತ್ತೆ ನಮ್ಮ ಬದುಕು  ಸಾಗುವತ್ತ ಹೋಗಬೇಕು. ಇದಕ್ಕಿಂತ ಬೇರೆ ಹೇಳೋದಕ್ಕೆ ನಂಗೊತ್ತಿಲ್ಲ. ಮಕ್ಕಳು ಜೊತೆಗಿರಬೇಕು ಅನ್ನಿಸುತ್ತದೆ, ಅವರಿಗೂ ತಮ್ಮ ತಂದೆ ಜೊತೆಗಿರಬೇಕು ಎಂದು ಅನಿಸುತ್ತದೆ. ಅನಿಸಿಕೆಗಳು ಅವರದ್ದು ಇದನ್ನು ಒಪ್ಪಿಕೊಳ್ಳಬೇಕು ಅಂತೇನು ಇಲ್ವಲ್ಲ. ನಾವಿರೋ ಜಾಗದಲ್ಲಿ ನಾವು ಬದುಕು ಕಟ್ಟಿಕೊಂಡಿದ್ದೇವೆ. ಅವರು ಅವರ ಜಾಗದಲ್ಲಿ. ಇಷ್ಟೆ ಬದುಕು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ