ಸ್ಟೇಟಸ್ ಕತೆಗಳು (ಭಾಗ ೩೪) - ವಿಚಾರ

ಸ್ಟೇಟಸ್ ಕತೆಗಳು (ಭಾಗ ೩೪) - ವಿಚಾರ

ಅಲ್ಲಿ ಪೂರ್ತಿ ಕತ್ತಲೆ ತುಂಬಿದೆ. ಕಣ್ಣು ಕತ್ತಲೆಗೆ ಹೊಂದಿಕೊಂಡರೂ ಒಳಗೇನಿದೆ ಎನ್ನುವುದು ಗೊತ್ತಾಗುತ್ತಿಲ್ಲ. ನಾನು ಅಲ್ಲಿ ಹಾದು ಹೋಗುತ್ತಿದ್ದಾಗ ಪಿಸುಮಾತುಗಳು ಕೇಳಿ ನಿಂತುಕೊಂಡೆ. ಮಾತನಾಡುತ್ತಿರುವವರು ಯಾರು ಅನ್ನೋದು ಗೊತ್ತಿಲ್ಲ.

"ನಾವು ಹೋರಾಟ ಮಾಡಲೇಬೇಕು, ಇಲ್ಲದಿದ್ದರೆ ನಮಗೆ ಸಿಗಬೇಕಾದ ಮೌಲ್ಯ ಸಿಗುವುದಿಲ್ಲ" "ಈ ಮನುಷ್ಯ ತನ್ನ ಉಪಯೋಗಕ್ಕೆ ಪದಗಳನ್ನು ಕಂಡುಹಿಡಿದಿದ್ದಾನೆ ಆದರೆ ನಮ್ಮ ಬಳಿ ಒಂದು ದಿನವೂ ನಾನು ನಿಮಗೋಸ್ಕರ ಇದನ್ನ ಬಳಸುತ್ತಿದ್ದೇನೆ ನಿಮಗೆ ಒಪ್ಪಿಗೆ ಇದೆಯಾ ಅಂತ ಕೇಳಿಲ್ಲ! ಹೀಗಿರುವಾಗ ನಾವು ಹೋರಾಟ ಮಾಡಲೇಬೇಕು"

"ಹು ಮಾರಾಯ, ನೋಡು ನಮ್ಮ ರೂಪಗಳು ಬೇರೆ, ಸ್ವಾದಗಳು ಬೇರೆ ಆದರೆ ಅವನು ಬಳಸುವ ಪದಗಳು ಒಂದೇ ಅಲ್ವಾ"

"ಅದೇ ನಾನು ಹೇಳುವುದು ನೋಡು ಸಕ್ಕರೆ, ಬೆಲ್ಲ, ಮಾವು, ಜೇನು ಎಲ್ಲದರ ಸ್ವಾದ ಬೇರೆಬೇರೆಯಾದರು ಇದೆಲ್ಲವನ್ನು ಒಂದಾಗಿ ಕವಿ ರುಚಿ ಅಥವಾ ಸವಿ ಅಂದು ಬಿಡ್ತಾನೆ" 

"ಅವನ ಕಣ್ಣಿಗೆ ಕಾಣುವ ಬೇರೆ ಬೇರೆ ತರದ ಸುಂದರತೆಯನ್ನು ಸೌಂದರ್ಯ, ಚಂದ ಎರಡು ಪದದೊಳಗೆ  ಮುಳುಗಿಸುತ್ತಾನೆ "

"ಖಾರ ಹುಳಿ ಒಗರು, ಪರಿಮಳಗಳು ಪ್ರತಿಯೊಬ್ಬರದ್ದು ವಿಭಿನ್ನವಾದರೂ ಆತನಲ್ಲಿ ವಿವರಿಸಲು ಪದಗಳಿಲ್ಲ. ಎಲ್ಲವನ್ನು ತನಗೆ ಗೊತ್ತಿರುವ ಒಂದೆರಡು ಪದಗಳ ಒಳಗೆ ತುರುಕಿ ಬಿಡುತ್ತಾನೆ "

"ಇಲ್ಲಿ ನಮ್ಮ ಸ್ವಂತ ಪ್ರತಿಭೆಗೆ ಮೌಲ್ಯ ಸಿಕ್ತಾ ಇಲ್ಲ ,ಈ ಮನುಷ್ಯ ತಪ್ಪನ್ನು ಒಪ್ಕೋಬೇಕು. ನನ್ನಲ್ಲಿ ಶಬ್ದ ದಾರಿದ್ರ್ಯ ಇದೇ ಅನ್ನೋದನ್ನ ಹೇಳಬೇಕು."

"ನಮಗೆ ನಮ್ಮ ಪ್ರತಿಭೆಗೆ ವೈಯಕ್ತಿಕತೆಗೆ ಮೌಲ್ಯ ಸಿಗಬೇಕು. ನಾವು ಹೋರಾಡಲೇಬೇಕು" 

ಅವರ ಮಾತುಗಳು ಹೌದೆನ್ನಿಸಿತು. ನಾವು ಬಳಸುವ ಪದಗಳಿಗೆ ಅವುಗಳನ್ನು ವಿವರಿಸುವ ಶಕ್ತಿ ಇಲ್ಲ. ಅಲ್ಲಾ, ಎಲ್ಲಾ ವಿಚಾರಗಳು ನನ್ನ ಮುಂದೆ ಬಂದು ನಿಂತು ಪ್ರಶ್ನೆ ಮಾಡಿದರೆ ಏನೆಂದು ಉತ್ತರ ಕೊಡಲಿ ಎನ್ನುವ ಯೋಚನೆಯಲ್ಲಿಯೇ ನಾನು ಅಲ್ಲಿಂದ ಸಾಗಿದೆ ....

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ : ಇಂಟರ್ನೆಟ್ ತಾಣ