ಸ್ಟೇಟಸ್ ಕತೆಗಳು (ಭಾಗ ೩೫೧) - ಗೋಡೆ
ಮಳೆಯ ಹನಿಗಳು ಮತ್ತಷ್ಟು ಬಿರುಸಾಗಿದೆ. ಎತ್ತರದಿಂದ ಬೀಳುತ್ತಿರುವ ಹನಿಗಳು ಯಾರ ಮೇಲೆ ಕೋಪದಿಂದಲೋ ಬೀಳುತ್ತಿವೆ ಅನ್ನೋದು ಗೊತ್ತಿಲ್ಲ. ಆ ಊರಿನ ಆ ಹಳೆಯ ಮನೆಯ ಇಟ್ಟಿಗೆಯ ಗೋಡೆಗೆ ಆ ರಭಸವನ್ನು ತಡೆದುಕೊಳ್ಳಲಾಗದೆ ನೀರಿನಿಂದ ತೊಯ್ದು ಸ್ವಲ್ಪ ಸ್ವಲ್ವೇ ಕರಗುತ್ತಿದೆ. ತುಂಬಾ ಸಮಯದಿಂದ ಮನೆಯನ್ನ ಹಿಡಿದು ನಿಲ್ಲಿಸಿದ್ದ ಗೋಡೆಗೆ ಈಗ ಅದನ್ನು ತಾಳಿಕೊಳ್ಳುವ ಶಕ್ತಿ ಇಲ್ಲ. ಮಣ್ಣಿನ ಕಣಗಳು ಸೇರಿ ಜೋಡಣೆಯಾಗಿದ್ದ ಇಟ್ಟಿಗೆ ಈಗ ಮತ್ತೆ ಮಣ್ಣೊಳಗೆ ಸೇರಲು ಹವಣಿಸಿದೆ. ಆ ಗೋಡೆಗೆ ಮಾತ್ರ ಗೊತ್ತಿತ್ತು. ಮನೆಯೊಳಗಿನ ಮನಗಳ ನೋವು. ಆ ಮಾತುಗಳನ್ನ ತನ್ನೊಳಗೆ ಇರಿಸಿಕೊಂಡು ಮಣ್ಣೊಳಗೆ ಇಳಿಯುತ್ತಿದೆ. ಗೋಡೆಯೇ ಅಳುತ್ತಿದೆ, ಅದರ ಕಣ್ಣೀರು ಮಳೆಯ ನೀರಿನೊಂದಿಗೆ ಬೆರೆತದ್ದು ಯಾರ ಅರಿವಿಗೂ ಬಂದಿಲ್ಲ. ಗೋಡೆಯ ಒಳಗೆ ಮನಗಳು ಬಿರುಕು ಬಿಟ್ಟಿವೆ, ನೆಲವನ್ನ ವಿಭಾಗಿಸೋದಕ್ಕೆ ಉಂಟಾದ ಜಗಳ ಮನೆಯನ್ನೇ ಬಿಟ್ಟು ಹೊರಡುವ ಮಟ್ಟಕ್ಕೆ ಬೆಳದೆದು ನಿಂತಿತು. ಇಬ್ಬರೂ ಮಕ್ಕಳು ತಮ್ಮ ದಾರಿ ಹಿಡಿದು ಹೊರಟಾಗ ಹಿರಿ ಜೀವ ಮತ್ತೇನು ಮಾಡಲು ಸಾಧ್ಯ... ದಿನವೂ ಕಣ್ಣೀರು ಇಳಿಸುತ್ತಾ ನೆಲ ಒದ್ದೆಯಾಯಿತು. ಆ ತಂಪಿನ ಕೂಗು ಗೋಡೆಗೆ ಕೇಳಿಸಿಯೋ ಏನೋ ಒಳಗಿನ ಯಾತನೆ ಹೊರಗೆ ತಿಳಿಯಲಿ ಅನ್ನೋದಕ್ಕೆ ಗೋಡೆ ಕುಸಿಯುತ್ತಿದೆ ಸಂಬಂಧಗಳೇ ಕುಸಿದಾಗ ಗೋಡೆಗಳೆಲ್ಲಾ ಯಾವ ಲೆಕ್ಕಾ. ಮಳೆ ಹೆಚ್ಚಾಗುತ್ತಿದೆ. ಕೊಚ್ಚಿ ಹೋಗಬಹುದೇನೋ ಗೋಡೆ ಗೊತ್ತಿಲ್ಲ. ಉತ್ತರಿಸಲು ಕಾಲದೊಂದಿಗೆ ಕಾಯಬೇಕು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ