ಸ್ಟೇಟಸ್ ಕತೆಗಳು (ಭಾಗ ೩೫೨) - ಮಾರಾಟ

ಸ್ಟೇಟಸ್ ಕತೆಗಳು (ಭಾಗ ೩೫೨) - ಮಾರಾಟ

ರೈಲು ಆಗಷ್ಟೇ ಸ್ಟೇಷನ್ ಬಿಟ್ಟು ಮುಂದಕ್ಕೆ ಓಡುತ್ತಿತ್ತು. ಒಳಗೆ ಕುಳಿತವರಿಗೆ ಅವರವರದೇ ಆಲೋಚನೆಗಳು. ಅವುಗಳ ಮಧ್ಯೆ ಟೀ-ಕಾಫಿ ಚಾಯ್ ತಿಂಡಿಗಳ ಕೂಗಾಟಗಳು ಕೇಳಿಸುತ್ತಿದ್ದವು. ಆಗಲೇ ದೂರದಲ್ಲಿ ಒಬ್ಬ ಹುಡುಗ ತನ್ನ ಬ್ಯಾಗಿನಲ್ಲಿ ಒಂದಷ್ಟು ಪುಸ್ತಕ ತುಂಬಿಸಿ ಮಾರಾಟ ಮಾಡಿಕೊಂಡು ಬರುತ್ತಿದ್ದ. "ಸರ್ ತಗೊಳ್ಳಿ ಸಾರ್ ,ಈ ಪುಸ್ತಕಗಳನ್ನು ನಿಮ್ಮ ಮಕ್ಕಳಿಗೆ ಕೊಡಿಸಿ, ಅವರ ಫ್ಯೂಚರ್ ಚೆನ್ನಾಗಿರುತ್ತೆ, ಅವರ ಎಜುಕೇಶನ್ ಗೆ ಯೂಸ್ ಆಗುತ್ತೆ, ಮುಂದೆ ನಡೆಯುವ ಎಕ್ಸಾಮ್ ಗೆ ಪ್ರಶ್ನೆಗಳು ಇಲ್ಲಿಂದಲೇ ಬರುತ್ತೆ , ಈ ಬುಕ್ ನಿಮ್ಮ ಮಕ್ಕಳ ಕೊಡಿಸಿ, ಅವರ ಲೈಪ್ ಚೆನ್ನಾಗಿರುತ್ತೆ, ಬುಕ್ಕನ್ನು ನಿಮ್ಮ ಮಕ್ಕಳಿಗೆ ಕೊಡಿಸಿ ಅವರ ಲೈಫ್ ಚೆನ್ನಾಗಿರುತ್ತೆ "ಅಂತ ಹೇಳುತ್ತಾ  ಮಾರಾಟ ಮಾಡುತ್ತಿದ್ದ. ಒಂದಿಬ್ಬರು ತೆಗೆದುಕೊಂಡು ಉಳಿದವರ್ಯಾರೂ ಅದರ ಕಡೆಗೆ ಗಮನ ಹರಿಸಲಿಲ್ಲ. ಅವನಿಗೆ ಅದನ್ನು ಮಾರಾಟ ಮಾಡಲೇಬೇಕಿತ್ತು. ಬೇರೆಯವರ ಮಕ್ಕಳು ಅದನ್ನು ಓದಿ ಅವರ ಲೈಫ್ ಸೆಟ್ಲ್ ಮಾಡಿಕೊಂಡರೆ, ಇವನು ಇದನ್ನ ಮಾರಾಟ ಮಾಡಿ ಬದುಕಬೇಕಿತ್ತು. ಬದುಕು ಒಬ್ಬೊಬ್ಬರದು ಒಂದೊಂದು ತರಹ. ಕೆಲವರಿಗೆ ಅಗತ್ಯ ಅನಿಸುವುದು ಇನ್ನು ಕೆಲವರಿಗೆ ಐಶಾರಾಮವಾಗಿರಬಹುದು ,ಕೆಲವರಿಗೆ ಐಶಾರಾಮವಾಗಿರೋದು ಇನ್ನೂ ಕೆಲವರಿಗೆ ದಿನಂಪ್ರತಿ ಬದುಕಾಗಿರಬಹುದು. ಯಾರೂ ಸಿಕ್ಕಿದರಲ್ಲಿ ಖುಷಿ ಅನುಭವಿಸುವುದಿಲ್ಲ. ಇನ್ನೊಂದಕ್ಕೆ ಬಯಸುತ್ತಾನೆ ಇರುತ್ತಾರೆ .ಆ ಹುಡುಗನಿಗೆ ಪುಸ್ತಕ ಮಾರಾಟವಾಗದನ್ನು ನೋಡಿ ಮರುದಿನದಿಂದ ಟೀ ಮಾರಾಟ ಮಾಡಿದರೆ ಸ್ವಲ್ಪ ಹೆಚ್ಚು ಹಣ ಸಂಪಾದಿಸಬಹುದು ಅನ್ನಿಸ್ತಿತ್ತು. ಟೀ ಮಾರಾಟ ಮಾಡೋನಿಗೆ ಹತ್ತು ರೂಪಾಯಿಂದ ನೂರು ಪುಸ್ತಕ ಮಾರಾಟ ಮಾಡಿದರೆ ಹೆಚ್ಚು ಹಣ ಸಂಪಾದಿಸಬಹುದು ಅನ್ನಿಸಿತು. ಅವರವರ ಅಭಿಪ್ರಾಯ ಅವರವರಿಗೆ …

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ