ಸ್ಟೇಟಸ್ ಕತೆಗಳು (ಭಾಗ ೩೬೦) - ಸಿಟ್ಟು
"ನನಗನಿಸುತ್ತೆ ಅವರಿಗೆ ನನ್ನ ಮೇಲೆ ಏನೋ ಸಿಟ್ಟಿದೆ, ನಿನ್ನೆವರೆಗೂ ಪ್ರತಿದಿನ ನನ್ನ ಹತ್ರ ಏನಾದ್ರೂ ಮಾತಾಡೋರು, ನನ್ನನ್ನು ನೋಡಿ ನೋಡಿ ನಗು ಬೀರಿ ಹೊರಡೋರು. ಒಂದು ದಿನವೂ ಹಾಗೆ ಹೋಗೋರಲ್ಲಾ. ಆದರೆ ಇವತ್ತು ನನ್ನ ಮುಖ ನೋಡ್ಲಿಲ್ಲ, ನನ್ನ ನೋಡಿ ಒಂದು ನಗು ಬೀರಲಿಲ್ಲ, ನಮಸ್ತೆ ಕೂಡ ಹೇಳದೆ ಹೋಗಿಬಿಟ್ಟಿದ್ದಾರೆ, ನಾನೇನು ತಪ್ಪು ಮಾಡಿದ್ದೇನೆ ಅಥವಾ ನನ್ನ ಬಗ್ಗೆ ಅವರಿಗೆ ಯಾರಾದರೂ ಸುಳ್ಳು ಹೇಳಿರಬಹುದಾ?"
"ನೀನ್ಯಾಕೆ ಹೀಗೆ ಯೋಚನೆ ಮಾಡ್ತೀಯಾ? ಅವರಿಗೆ ಚಿಂತೆ ಆಗುವಂತಹ ಬೇರೆ ವಿಚಾರ ಇರಬಹುದು, ಅದಕ್ಕಾಗಿ ನಿನ್ನನ್ನು ಗಮನಿಸದೇ ಇದ್ದಿರಬಹುದು" "ಇಲ್ಲಪ್ಪ ಹಾಗಾಗಲು ಸಾಧ್ಯವೇ ಇಲ್ಲ, ಒಂದು ಸಲ ದೊಡ್ಡ ದೊಡ್ಡ ತಲೆನೋವು ಇದ್ದಾಗಲೂ ಕೂಡ ನನ್ನ ನೋಡಿ ಪುಟ್ಟ ಮಾತುಕತೆ ನಡೆಸಿ ಹೋಗಿದ್ದರು"
"ಅದು ಯಾವಾಗಲೋ ಏನೋ, ಈಗ ಪರಿಸ್ಥಿತಿ ಬದಲಾಗಿದೆ. ಪ್ರತಿಯೊಬ್ಬರಿಗೂ ಅವರದೇ ಅಗತ್ಯಗಳು ತುಂಬಾ ಇರುತ್ತೆ. ಹಾಗಾಗಿ ಇವತ್ತು ಒಂದು ದಿನ ನಿನ್ನ ನೋಡಿ ಮಾತನಾಡಲಿಲ್ಲ ಅನ್ನೋ ಕಾರಣಕ್ಕೆ ಅವರಿಗೆ ನಿನ್ನ ಮೇಲೆ ಕೋಪ ಇದೆ ಅನ್ನೋದು ತಪ್ಪಲ್ವಾ?"
" ಹಾಗಲ್ಲ ಅವರ ಬಗ್ಗೆ ನನಗೆ ಸರಿಯಾಗಿ ಗೊತ್ತು. ನಾನೇನೋ ತಪ್ಪು ಮಾಡಿದ್ದೇನೆ. ಅದೇನು ಅಂತ ನಾಳೆ ಹೋಗಿ ಅವರತ್ರ ಸಾರಿ ಕೇಳಬೇಕು "
"ನನಗೇನೋ ನೀನು ಅನಗತ್ಯ ಯೋಚನೆಗಳನ್ನ ಮಾಡ್ಕೋತಾ ಇದ್ದೀಯ ಅಂತ ಅನಿಸುತ್ತಿದೆ. ಪ್ರತಿಯೊಬ್ಬರಿಗೂ ಅವರದೇ ಆದ ಬದುಕಿದೆ. ಅದನ್ನ ಬದುಕುವುದಕ್ಕೆ ಬಿಡಬೇಕು. ಪ್ರತಿಯೊಬ್ಬರೂ ನನ್ನ ಬದುಕಿನಲ್ಲಿ ಅವರ ಬದುಕನ್ನು ಬದುಕಬೇಕು ಅನ್ನೋದು ತಪ್ಪಾಗುತ್ತೆ. ಸ್ವಲ್ಪ ದಿನ ಕಾದು ನೋಡು. ಇದೇ ಭಾವನೆ ಹೀಗೆ ಮುಂದುವರಿದರೆ ಎಲ್ಲೋ ಒಂದು ಕಡೆ ತಪ್ಪಾಗಿದೆ ಅಂತ ತಿಳಿದುಕೊಳ್ಳುವ. ಆಗಬಹುದಲ್ಲವೇ? ಸದ್ಯಕ್ಕೆ ಕಾಯೋಣ ನಾಳೆ ನೋಡೋಣ..."
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ