ಸ್ಟೇಟಸ್ ಕತೆಗಳು (ಭಾಗ ೩೬೧) - ಮುಖವಾಡ
ಬೆನ್ನು ತಿರುಗಿಸಿ ಹೊರಟವರ ಮುಖ ಭಾವದಲ್ಲಿ ಅದೇನು ಇರಬಹುದು. ಗೊತ್ತಿಲ್ಲ. ನಮಗೆ ಬೆನ್ನು ತಿರುಗಿಸಿ ಹೊರಡುವುದಕ್ಕೆ ಮುಂಚೆ ಆತ ನಮ್ಮ ಜೊತೆಗೆ ಮಾತನಾಡಿದ್ದ. ಅದು ನೈಜತೆಯೋ ಮುಖವಾಡವೋ ಅನ್ನೋದು ನಮಗರಿವಿಲ್ಲ. ನಮಗೆ ಬೆನ್ನು ತಿರುಗಿಸಿದ ತಕ್ಷಣ ಆತ ಮುಖವಾಡವನ್ನು ಧರಿಸಿದನೋ, ಧರಿಸಿದ ಮುಖವಾಡವನ್ನು ಕಿತ್ತೆಸೆದು ನಡೆದನೋ ಅನ್ನೋದರ ಅರಿವಿರೋದಿಲ್ಲ. ಬದುಕುವುದಾದರೆ ಮಾತನಾಡಿದ ಭಾವವನ್ನೇ ತುಂಬಿಕೊಂಡು ಬೆನ್ನು ತಿರುಗಿಸಿದ ನಂತರವೂ ನಡೆದು ಬಿಡಿ ಅಂತ ಹೇಳಬಹುದು. ಆದರೆ ಪರಿಸ್ಥಿತಿ ಸಂದರ್ಭ ಸಮಯಗಳು ಪ್ರತಿಯೊಂದನ್ನು ನಿರ್ಧರಿಸುತ್ತವೆ. ಬೆನ್ನು ತಿರುಗಿಸಿ ಹೊರಟ ಅವಳ ಭಾವ ಆಗಷ್ಟೇ ಪ್ರೀತಿಯ ನಿವೇದನೆಯನ್ನು ಮಾಡಿಕೊಂಡ ಅವನ ಬದುಕನ್ನ ನಿರ್ಧರಿಸುವಂತಹದ್ದು ಆಗಿರಬಹುದು, ಬೆನ್ನು ತಿರುಗಿಸಿ ಹೊರಟ ಯಜಮಾನನ ಭಾವ ಕೆಲಸದವನಿಗೆ ಉಳಿಯುವಿಕೆಯ ನಂಬಿಕೆಯನ್ನು ನೀಡಬಹುದು, ಬೆನ್ನು ತಿರುಗಿಸಿ ಹೊರಟ ವಿದ್ಯಾರ್ಥಿಯ ಬದುಕಿನ ಭವಿಷ್ಯ ಗುರುಗಳಿಗೆ ತಿಳಿಯಬಹುದು, ಬೆನ್ನು ತಿರುಗಿಸಿ ಹೊರಟ ಮಗುವಿನ ಭಾವ ತಾಯಿಗೆ ಇನ್ನಷ್ಟು ಮಮತೆಯನ್ನು ನೀಡಬಹುದು. ಹಾಗಾಗಿ ಬೆನ್ನು ತಿರುಗಿಸುವ ಮುಂಚೆ ಇದ್ದ ಬದುಕು ಪ್ರತಿದಿನವೂ ಹೊಸದಾಗಿರಲಿ ಮತ್ತೊಮ್ಮೆ ಬದುಕಬೇಕು ಎನ್ನುವಂತಿರಲಿ.ಬೆನ್ನು ಹಾಕಿದಮೇಲೆ ಬದುಕು ಮುಂದುವರೆದು ಹೊಸ ಆಶಾಭಾವ ನೀಡುತ್ತಿರಲಿ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ