ಸ್ಟೇಟಸ್ ಕತೆಗಳು (ಭಾಗ ೩೬೩) - ಗೊಂಬೆ
"ಬೊಂಬೆ ಆಡ್ಸೋನು ಮೇಲೆ ಕುಂತವನೆ" ಹಾಡು ರೇಡಿಯೋದಲ್ಲಿ ಕೇಳುತ್ತಿತ್ತು. ಅರಳಿ ಕಟ್ಟೆ ಮೇಲೆ ಕುಳಿತ ಒಂದಿಷ್ಟು ಹುಡುಗರು ಮಾತನಾಡಿಕೊಳ್ಳುತ್ತಿದ್ದರು.
" ಈ ಭಗವಂತ ನಮ್ಮನ್ನ ಅಲ್ಲಲ್ಲಿ ಕಟ್ಟಿ ಹಾಕಿ ಬಿಡುತ್ತಾನೆ. ಯಾವುದೋ ಒಂದು ಕೆಲಸವನ್ನು ಮಾಡುವಾಗ ತಡೆ ಹಿಡಿಯುತ್ತಾನೆ. ಮುಂದುವರೆಯುವುದಕ್ಕೇ ಬಿಡುವುದಿಲ್ಲ. ಒಂದಷ್ಟು ಸಮಸ್ಯೆಗಳನ್ನು ಕೊಡುತ್ತಾನೆ, ತೊಂದರೆಗಳಿಗೆ ಸಿಲುಕಿಸುತ್ತಾನೆ. ಕೆಲವು ವ್ಯಕ್ತಿಗಳನ್ನ ಅಡ್ಡಗಾಲು ಹಾಕಿಸುವುದಕ್ಕೆಂದಲೇ ಹುಟ್ಟಿಸಿರುತ್ತಾನೆ. ಹೀಗಾದರೆ ಮುಂದುವರೆಯುವುದು ಹೇಗೆ ? ದೇವರು ನಮ್ಮನ್ನ ನಮ್ಮ ಪಾಡಿಗೆ ಬಿಟ್ಟುಬಿಡಬೇಕು. ನಾವಾಗಿಯೇ ಬದುಕುತ್ತೇವೆ. ಯಾವತ್ತೋ ಒಂದು ದಿನ ಈ ಭೂಮಿಯಲ್ಲಿ ನಮ್ಮ ಆಟದ ಅವಧಿ ಮುಗಿದ ತಕ್ಷಣ ನಮ್ಮನ್ನ ಕರೆದುಕೊಂಡು ಬಿಡಬಹುದು"
"ಇಲ್ಲಪ್ಪ ಆಗೋದಿಲ್ಲ, ನೀನು ಗೊಂಬೆಯಾಟವನ್ನು ನೋಡಿರಬಹುದು. ಅಲ್ಲಿ ಗೊಂಬೆ ಆಡಿಸೋನು ಇಲ್ಲದಿದ್ದರೆ ಅದು ಯಾವುದೇ ಉಪಯೋಗಕ್ಕೆ ಬರದೆ ಮೂಲೆಗೆ ಸರಿದು ಬಿಡುತ್ತದೆ. ಹಾಗಾಗಿ ಮೇಲೆ ಗೊಂಬೆ ಆಡಿಸೋನು ಇದ್ದಾಗ ಮಾತ್ರ ನೋಡುಗರಿಗೂ ಚಂದ. ಆ ಗೊಂಬೆಗೆ ಜೀವ ಬಂದಂತೆ ಅದನ್ನು ಆಡಿಸುತ್ತಾ ಇರಬೇಕು. ಕೆಲವು ಕ್ಷಣ ನಿಲ್ಲಿಸಬೇಕು. ಮತ್ತೊಂದಷ್ಟು ಆಡಿಸಬೇಕು ಕೆಲವು ಕಡೆ ಹಾರಿಸಬೇಕು. ಕೆಲವು ಕಡೆ ಬೀಳಿಸಬೇಕು. ಗೊಂಬೆಗೆ ಜೀವ ಬಂದಂತೆ ಕುಣಿಯಬೇಕು. ಸೂತ್ರ ಮಾತ್ರ ಬಿಟ್ಟು ಬಿಡಬಾರದು. ನಮ್ಮಜೀವನದ ಸೂತ್ರಗಳು ಭಗವಂತನ ಕೈಯಲ್ಲಿದ್ದಾಗ ಮಾತ್ರ ಬದುಕಿಗೊಂದು ಅರ್ಥ. ನಿರಾಕಾರನಲ್ಲಿ ಕೇಳಿಕೊಳ್ಳುವುದಿಷ್ಟೆ, ನೀನಾಡಿಸಿದಂತೆ ಆಡುವವನು ನಾನು. ಯಾವತ್ತೂ ಬೀಳಿಸುವುದಿಲ್ಲ ಎಂಬ ನಂಬಿಕೆಯಿದೆ ಬಾಳುತ್ತೇನೆ....ಹಾಡು ಬದಲಾಯಿತು. ಮೂರು ದಿನದ ಸಂತೆ....
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ