ಸ್ಟೇಟಸ್ ಕತೆಗಳು (ಭಾಗ ೩೬೬) - ಹೆಣ್ಣು
ಖಾಲಿ ಕೋಣೆಯಲ್ಲಿ ತಲೆಯನ್ನು ಗೋಡೆಗೆ ಆನಿಸಿಕೊಂಡು ಆಕೆ ಅಳುತ್ತಿದ್ದಾಳೆ. ಕೋಣೆ ಖಾಲಿ ಇದ್ದರೂ ಮನಸ್ಸಲ್ಲಿ ಗೊಂದಲಗಳು ತುಂಬಿ, ಕಣ್ಣೀರು ಒಂದೊಂದೇ ಬಿಂದುಗಳಾಗಿ ನೆಲಕ್ಕೆ ಇಳಿಯುತ್ತಿದೆ. ನೆನಪುಗಳಷ್ಟೇ ಮತ್ತೆ ಮತ್ತೆ ಚುಚ್ಚುತ್ತಿವೆ. ಮನೆಯೊಳಗೆ ಅನುಭವಿಸಿದ ನೋವುಗಳು, ಮನಸ್ಸಿಗೆ ಘಾಸಿಯಾದ ವಿಚಾರಗಳು. ಪ್ರತಿದಿನ ನೆನಪಾಗುವುದು ಇಷ್ಟೇ. ನನ್ನ ಹುಟ್ಟಿಗೆ ಅರ್ಥವೇನಿದೆ? ನನಗಿಷ್ಟದ ಬದುಕನ್ನ ಬದುಕಲಿಕ್ಕಾಗದ, ಎಲ್ಲವೂ ಪರರ ಇಚ್ಛೆಯಂತೆ ಜೀವನ ಸಾಗಿಸುವುದಾದರೆ, ನನಗಿಷ್ಟದ ಬದುಕನ್ನ ಬದುಕೋದು ಯಾವಾಗ? ಮನೆಯೊಳಗೂ ಮನೆಯ ಹೊರಗಿನವರಂತೆ ಬದುಕುವ ಹೀನಾಯ ಸ್ಥಿತಿಗೆ ಏನೆನ್ನಲಿ! ಕಷ್ಟದ ಸಮಯಲ್ಲಿ ಜೊತೆಗೆ ಇರಬೇಕಾದ ಕುಟುಂಬ ಅನಿಷ್ಟವೆಂದು ದೂರ ಸರಿಸಿದರೆ ಆಕೆಗೆ ಆತ್ಮಸ್ಥೈರ್ಯ ಸಿಗುವುದಾದರೂ ಎಲ್ಲಿಂದ? ಪ್ರೀತಿ ಅನುಕಂಪ ಮಮತೆ ದಯೆ ಎಲ್ಲವನ್ನೂ ಕೂಡ ಪುಸ್ತಕದಲ್ಲಿ ಓದಿ, ಪಕ್ಕದ ಮನೆಯ ವಿಚಾರವನ್ನ ಕೇಳಿಯೇ ಅನುಭವವಷ್ಟೇ ಹೊರತು ಮನೆಯಿಂದ ಯಾವುದೂ ಸಿಗಲೇ ಇಲ್ಲ?. ಊರಿಂದ ಹೊರಗೆ ಕೆಲಸಕ್ಕಾಗಿ ಬಂದರೂ ಮನೆಯ ನೆನಪಾಗಿ ಪ್ರೀತಿಗೋಸ್ಕರ ಕರೆ ಮಾಡಿದರೆ ಮತ್ತದೇ ಅಸಡ್ಡೆಯ ಮಾತುಗಳು. ಮನೆಗೋಸ್ಕರ ಹಗಲಿರುಳು ದುಡಿದರೂ ನೆನಪಾಗದ ಶ್ರಮ , ಅವಳ ನಿರ್ಧಾರ ಇಷ್ಟೆ. ಬದುಕಬೇಕು ತಿರಸ್ಕರಿಸಿದವರ ಮುಂದೆ ಪುರಸ್ಕರಿಸುವವರೆಗೂ ಬದುಕಬೇಕು. ಕಣ್ಣೀರು ಒರೆಸಿ, ದಿನದ ಕೆಲಸದ ಕಡೆಗೆ ಹೊರಟಳು. ಹೆಣ್ಣು ಮನಸ್ಸು ಮಾಡಿದರೆ ಖಂಡಿತ ಸಾಧಿಸುತ್ತಾಳಂತೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ