ಸ್ಟೇಟಸ್ ಕತೆಗಳು (ಭಾಗ ೩೬೯) - ಕೊನೆ
ಕಂಬಿಗಳ ಕೋಣೆಯಿಂದ ಹೊರ ಬಂದಿದ್ದಾನೆ. ಹಲವು ದಿನಗಳಿಂದ ನಿದ್ದೆ ಸೇರುತ್ತಿಲ್ಲ. ಮೈಯಲ್ಲಾ ಏನೋ ಸಣ್ಣ ಕಂಪನ. ಆದರೆ ಇಂದು ಎಲ್ಲವೂ ವಿಪರೀತವಾಗಿದೆ. ಈ ದಿನ ವಿಶೇಷವಾಗಿ ಸ್ನಾನ ಮಾಡುವ ಅವಕಾಶ, ವೈದ್ಯರನ್ನು ಕರೆಸಿ ಆರೋಗ್ಯ ಪರೀಕ್ಷೆ, ಜೊತೆಗೆ ಇಷ್ಟದ ತಿಂಡಿಗಳನ್ನು ಸುತ್ತ ಬಡಿಸುತ್ತಿದ್ದಾರೆ. ಆಹಾ... ಸುಂದರವಾಗಿದೆ ಅಲ್ವಾ? ಭೀಕರತೆಯ ಮೌನ.
ನಡುಗುವ ಕೈಗಳಿಂದಲೇ ಅನ್ನವನ್ನು ಬಾಯೊಳಗೆ ಇರಿಸುತ್ತಿದ್ದರೂ ಗಂಟಲೊಳಗೆ ಇಳಿಯುತ್ತಿಲ್ಲ. ಇಡೀ ದೇಹ ನಡುಗುತ್ತಿದೆ. ಕಣ್ಣೀರು ಕೆನ್ನೆಯಿಂದ ಜಾರುವಾಗ ಸಣ್ಣ ಕಂಪನಕ್ಕೆ ಹನಿಗಳು ಕೂಡ ಇನ್ನಷ್ಟು ನಡುಗಿದಂತೆ ಕಾಣುತ್ತಿದೆ. ದೇಹಪೂರ್ತಿ ಬೆವರಿದೆ ಮುಂದಿನ ಕ್ಷಣದ ಭೀಕರತೆಯನ್ನು ನೆನೆದುಕೊಂಡು ಯಾವುದು ಹೊಟ್ಟೆಯೊಳಗೆ ಇಳಿಯುತ್ತಿಲ್ಲ. ಎಲ್ಲವೂ ಕೊನೆಯಾದಂತೆ ಆ ಕ್ಷಣದ ಮುಳ್ಳು ಕೂಡ ಒಂದು ಕ್ಷಣ ನಿಂತು ಚಲಿಸಿದಂತೆ. ಕಾಣುವ ದೃಶ್ಯಗಳೆಲ್ಲವೂ ಕೊನೆಯ ಬಾರಿ ನೋಡು ಎಂಬಂತೆ ಹಾದುಹೋಗುತ್ತಿದೆ. ಆತ ಗಲ್ಲು ಶಿಕ್ಷೆಯ ಕೈದಿ. ಇನ್ನು ಕೆಲವೇ ಕ್ಷಣಗಳಲ್ಲಿ ಗಲ್ಲಿಗೇರಿಸಲು ಆಜ್ಞೆಯಾಗಿದೆ.
ಸಣ್ಣ ಮಕ್ಕಳನ್ನು ಕೊಂದ ತಪ್ಪಿಗೆ ಗಲ್ಲುಶಿಕ್ಷೆಯನ್ನು ನ್ಯಾಯಾಧೀಶರು ಘೋಷಿಸಿದ್ದಾರೆ. ಸಾಯಿಸುವಾಗ ಯಾವುದರ ಪರಿವೆಯೂ ಇಲ್ಲದವನು ಈಗ ಪಶ್ಚಾತ್ತಾಪ ಪಡುತ್ತಿದ್ದಾನೆ. ಬದುಕಿಗಾಗಿ ಮನವಿ ಮಾಡಿಕೊಳ್ಳುತ್ತಿದ್ದಾನೆ. ಹಿಂದೆ ಮಕ್ಕಳು ಕೂಡ ಹೀಗೇ ಬೇಡಿದ್ದರು. ಕಾಲ ಮತ್ತೆ ತಿರುಗಿ ಬರುತ್ತದೆ. ಗಂಟಲು ಉಬ್ಬಿ ಬಂತು. ಇನ್ನು ಕೆಲವೇ ಕ್ಷಣದಲ್ಲಿ ಅದೇ ಗಂಟಲು ಬಿಗಿದುಕೊಳ್ಳುತ್ತದೆ. ಮತ್ತೆ ಎಂದು ಅದರೊಳಗೆ ಉಸಿರು ಇಳಿಯುವುದಿಲ್ಲ ಆಹಾರವು ಇಳಿಯುವುದಿಲ್ಲ. ಸಾವಿನ ಕ್ಷಣವನ್ನ ಕಣ್ಣ ಮುಂದಿಟ್ಟುಕೊಂಡು ಗಲ್ಲುಗಂಬಕ್ಕೆ ಏರುತ್ತಿದ್ದಾನೆ... ಬದುಕು ವಿಚಿತ್ರ...!
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ