ಸ್ಟೇಟಸ್ ಕತೆಗಳು (ಭಾಗ ೩೬) - ಚಂದಿರ

ಸ್ಟೇಟಸ್ ಕತೆಗಳು (ಭಾಗ ೩೬) - ಚಂದಿರ

ಕೋಣೆಯೊಳಗೆ ಕುಳಿತು ಬೇಸರವಾಗಿ ಅಂಗಳಕ್ಕೆ ಬಂದು ನಿಂತಾಗ ಮಧ್ಯರಾತ್ರಿ ಆಗಿತ್ತು. ಊರು ಮಲಗಿತ್ತು. ಹಾಗೆ ನೀಲಾಕಾಶದ ಕಡೆಗೆ ತಲೆ ಎತ್ತಿದಾಗ ತಾರೆಗಳ ಮಿನುಗುವಿಕೆಯಿಂದ ಒಂದಷ್ಟು ಬೆಳಕು ಹಬ್ಬಿತ್ತು. ತಾರೆಗಳ ನಡುವೆ ನಗುತ್ತಿದ್ದ ಚಂದಿರ ನೇರವಾಗಿ ಬಂದು ಮಾತನಾಡಿಸಿದ. "ಒಂದು ವಿಚಾರವನ್ನು ನಿಂಗೆ ಹೇಳಬೇಕಿತ್ತು, ನೋಡು ಜನ ಇದ್ದಾರಲ್ಲ ನೀನು ದಿನವೂ ಒಂದೇ ತರವಾಗಿ ಇದ್ರೆ ನಿನ್ನನ್ನ ಗಮನಿಸುವುದೇ ಇಲ್ಲ. ಬದಲಾದರೆ ಮಾತ್ರ ನಿನ್ನ ಬಗ್ಗೆ ಗಮನ ಹರಿಸುತ್ತಾರೆ. ಬದಲಾವಣೆಗೆ ಮಾತ್ರ ಹೆಚ್ಚು ಒತ್ತು ಕೊಡುತ್ತಾರೆ. ನೋಡು ನನಗೆ ಹುಣ್ಣಿಮೆಗೆ ಅಮಾವಾಸ್ಯೆಗೆ ಒಂದಷ್ಟು ಮಹತ್ವ ಸಿಗುತ್ತೆ. ಈ ಗ್ರಹಣ ಬಂದರೆ, ನನ್ನ ಸುತ್ತ ಚಕ್ರವೇನಾದರೂ ಕಂಡರೆ ದೊಡ್ಡ ಸುದ್ದಿಯಾಗುತ್ತದೆ. ಊರಲ್ಲೆಲ್ಲಾ ಮಾತು  ಓಡಾಡುತ್ತೆ. ಟಿವಿ ಪೇಪರ್ ಗಳು  ನನ್ನ ಬಗ್ಗೆನೇ ಬರೆಯುತ್ತವೆ. ಹಾಗಾಗಿ ನಿನ್ನ ಬದುಕು ಸದ್ದಾಗಬೇಕು. ಒಂದಷ್ಟು ಬದಲಾವಣೆ ಆಗಾಗ ಮಾಡಿಕೊಳ್ಳದಿದ್ದರೆ ನೀನು ಸದ್ದಿಲ್ಲದೆ ಮಣ್ಣನ್ನು ಸೇರ್ತಿಯ. ಬದುಕಿದ ಮೇಲೆ ಸದ್ದು ಮಾಡದಿದ್ದರೆ ಹೇಗೆ ಮಾರಾಯ?.." ಅಂತ ಹೇಳಿ ಹೊರಟು ಹೋದ. ನಾನಾಯ್ತು ನನ್ನ ಕೆಲಸ ಆಯ್ತು ಅಂದುಕೊಂಡಿದ್ದವ ಇಲ್ಲ ನಾನು ಏನಾದರೂ ಹೊಸತನ್ನು ಮಾಡಲೇಬೇಕು ಅನ್ನೋ ಯೋಚನೆಯಲ್ಲಿ ಮತ್ತೆ ಕೋಣೆಯೊಳಕ್ಕೆ ನಡೆದೆ. ಚಂದ್ರ ನನ್ನನ್ನೇ ನೋಡುತ್ತಿರಬಹುದು ಅಲ್ವಾ?....

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ