ಸ್ಟೇಟಸ್ ಕತೆಗಳು (ಭಾಗ ೩೭೧) - ಹೊಸ ಬದುಕು
ಊರು ಬಿಡಲೇಬೇಕು. ಹಿಂದಿನ ದಿನ ರಾತ್ರಿಯೇ ಎಲ್ಲವನ್ನೂ ಕಬ್ಬಿಣದ ಸಣ್ಣ ಟ್ರಂಕಿಗೆ ತುಂಬಿಸಿ ಬೀಗ ಹಾಕಿಬಿಟ್ಟಳು ಅಮ್ಮ. ಇನ್ನೊಂದೆರಡು ಸಣ್ಣಚೀಲ, ಟ್ರಂಕು ಇಷ್ಟನ್ನು ಹಿಡಿದುಕೊಂಡು ಪರಿಚಯ ಇಲ್ಲದ ಊರಿಗೆ ಬಂದು ಇಳಿದು ಬಿಟ್ಟೆವು. ಇನ್ನು ಉಳಿದ ಮೂರು ವರ್ಷವನ್ನು ಇಲ್ಲಿಯೇ ಕಳೆಯಬೇಕು. ಯಾರದೂ ಗುರುತಿಲ್ಲ. ಅಪ್ಪ-ಅಮ್ಮನಿಗೆ ಇಲ್ಲೇ ಬಿಟ್ಟು ಹೋಗೋಕು ಮನಸ್ಸಿಲ್ಲ.
ಆದರೆ ಬದುಕು ಅನ್ನೋದು ಬಯಸಿದಂತೆ ಅಲ್ಲವಲ್ಲ. ಮನೆಯೊಳಗೆ ಬದುಕಿದವ ಇಂದು ವಿದ್ಯಾರ್ಥಿನಿಲಯಕ್ಕೆ ಪ್ರವೇಶವನ್ನು ಪಡೆಯಲೇಬೇಕು. ಸಾವಿರಾರು ಜನ ಇಲ್ಲಿ ನನ್ನ ಹಾಗೆ ಬಂದೋರು, ಎಲ್ಲರೂ ತಮ್ಮ ಬ್ಯಾಗುಗಳ ಜೊತೆ ಕನಸನ್ನು ಹೊತ್ತವರು. ಅಮ್ಮ ಹೇಳಿದ್ದಿಷ್ಟೆ ನೀನು ಇಲ್ಲಿಂದ ಒಂದಷ್ಟು ಒಳ್ಳೆಯ ಯೋಜನೆಗಳನ್ನು ತುಂಬಿಸಿಕೊಂಡು ಹೋಗಿದ್ದೀಯಾ ಅದರ ಜೊತೆ ಕೆಟ್ಟ ಯೋಚನೆಗಳು ಇರಬಹುದು. ಆದರೆ ಅಲ್ಲಿಂದ ಬದುಕಿ ಮತ್ತೆ ಊರಿಗೆ ಹಿಂತಿರುಗುವಾಗ ಕೆಟ್ಟ ಆಲೋಚನೆಗಳನ್ನು ಅಲ್ಲಿಯೇ ಬಿಟ್ಟು ಬರುವಾಗ ಲಗೇಜುಗಳ ಜೊತೆ ಹೊಸ ಆಲೋಚನೆಗಳು ಹೊಸ ಬದುಕಿನ ರೀತಿಗಳನ್ನು ಕಲಿತುಕೊಂಡು ಹಿಂತಿರುಗಬೇಕು. ಆಗಾಗ ಇಲ್ಲಿಗಿಂತ ಮನೆಯೆ ವಾಸಿ ಅನ್ನುವ ಯೋಚನೆಯೂ ಬರುತ್ತದೆ. ಆದರೆ ಬದುಕಿನಲ್ಲಿ ಬದುಕಬೇಕು. ನಿನ್ನ ಬದುಕಿಗೆ ಅಗತ್ಯವಾದ ಹಣಕ್ಕೆ ದಿನದ ದುಡಿಮೆಗಿಂತ ಹೆಚ್ಚು ದುಡಿಮೆಯನ್ನು ನಾವು ದುಡಿಯುತ್ತೇವೆ. ಯಾಕೆಂದರೆ ನಮ್ಮ ದುಡಿಮೆ ಕಷ್ಟವಾದಾಗ ನೀನು ದುಡಿಬೇಕಲ್ವಾ ನಂಬಿಕೆಯಷ್ಟೇ. ಇಷ್ಟೆಲ್ಲ ಮಾತುಗಳನ್ನು ಕೇಳಿಕೊಂಡು ಸರತಿಸಾಲಿನಲ್ಲಿ ನನ್ನ ಸರದಿಗಾಗಿ ಕಾಯುತ್ತಿದ್ದೇನೆ. ಇನ್ನು ಕೆಲವೇ ಕ್ಷಣದಲ್ಲಿ ನನಗೆ ನನ್ನ ಬದುಕುವ ಜಾಗ ಸಿಗುತ್ತದೆ. ಹೊಸ ಗೆಳೆಯರು, ಹೊಸ ಊರು, ಹೊಸ ಆಹಾರ, ಹೊಸ ಗಾಡಿ, ಎಲ್ಲಾ ಹೊಸತುಗಳಿಂದ ಹೊಸವಿಚಾರಗಳನ್ನು ಪಡೆದುಕೊಂಡು ಇನ್ನಷ್ಟು ಹೊಸದಾಗಿ ಮತ್ತೆ ನನ್ನೂರಿಗೆ ಕಾಲಿಡಬೇಕು. ಕೊನೆಗೂ ನಾನು ನಾನಾಗಿರಲೇಬೇಕು…!
-ಧೀರಜ್ ಬೆಳ್ಳಾರೆ
ಸಾಂಕೇತಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ