ಸ್ಟೇಟಸ್ ಕತೆಗಳು (ಭಾಗ ೩೭೨) - ಮಾತು

ಸ್ಟೇಟಸ್ ಕತೆಗಳು (ಭಾಗ ೩೭೨) - ಮಾತು

ನನಗೆ ಉಗುರು ಕಚ್ಚುವ ಅಭ್ಯಾಸ ಸ್ವಲ್ಪ ವಿಪರೀತವೇ ಇದೆ. ಇಂದಿನವರೆಗೂ ನಾನು ಉಗುರನ್ನು ಕತ್ತರಿಸಿದ ನೆನಪಿಲ್ಲ. ನನಗರಿವಿಲ್ಲದೆ ನನ್ನ ಹಲ್ಲುಗಳ ಇದೇ ಕೆಲಸವನ್ನು ಮಾಡುತ್ತಿದೆ. ಇದಕ್ಕಾಗಿ ಪ್ರತಿಸಲವೂ ಎಲ್ಲರ ಬಳಿಯಿಂದ ಬೈಗುಳವನ್ನು ಕೇಳುತ್ತಿರುತ್ತೇನೆ. ನನಗೆ ಇದನ್ನ ನಿಲ್ಲಿಸಬೇಕು ಅಂತ ಆಸೆ. ಎಷ್ಟೇ ಪ್ರಯತ್ನಪಟ್ಟರೂ ಹೋಗುತ್ತಾನೆ ಇಲ್ಲ. ಈಗೀಗ ಅದಕ್ಕೊಂದು ಹೊಸ ಸಮಜಾಯಿಶಿ ಕೊಡುವುದಕ್ಕೆ ಆರಂಭ ಮಾಡಿದ್ದೇನೆ. "ಯಾರಿಗೆ ವಿಪರೀತ ಯೋಜನೆಗಳಿವೆ, ಭವಿಷ್ಯದ ಬಗ್ಗೆ ಹೊಸ ಆಲೋಚನೆಗಳಿವೆ, ಅವರು ತಮ್ಮ ಉಗುರುಗಳನ್ನ ಕಚ್ಚುತ್ತಾರೆ. ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುವ ಹೊಸ ವಿಧಾನ. ಆದ್ರೂ ನಾನು ಮಾಡುತ್ತಿರುವುದು ಒಳ್ಳೆಯ ಅಭ್ಯಾಸವಲ್ಲ ಅನ್ನೋದರ ಅರಿವಿದೆ. ಇತ್ತೀಚಿಗೆ ಮಾತಿಗೆ ಮಾತು ಬೆಳೆದು ತಂಗಿಯ ಜೊತೆ ಒಪ್ಪಂದವಾಯಿತು ಮುಂದಿನ ಸಲ ಮನೆಗೆ ಬರುವಾಗ ಕೈಯಲ್ಲಿ ಉದ್ದ ಉಗುರು ಇರಬೇಕು. ನನಗೆ ಐದು ಸಾವಿರ ರೂಪಾಯಿ ಬಹುಮಾನ ಸಿಗುತ್ತೆ ಅನ್ನುವ ಮಾತಾಯಿತು. ಈ ದುಡ್ಡಿನ ವಿಚಾರ ಬಂದಾಗ ಅಷ್ಟು ಸುಲಭಕ್ಕೆ ಬಿಡೋ ಜಾತಿಯವನಲ್ಲ. ಹಾಗಾಗಿ ಒಪ್ಪಿಕೊಂಡು ಬಿಟ್ಟೆ. ಅದೆಷ್ಟು ತಡೆದುಕೊಂಡಿದ್ದೇನೆ ಅನ್ನೋದು ನನಗೆ ಮಾತ್ರ ಗೊತ್ತು. ಪ್ರತಿದಿನವೂ ಬಾಯಿಯ ಬಳಿಗೆ ತಲುಪುವ ಬೆರಳುಗಳನ್ನ ಹಿಡಿತದಲ್ಲಿಟ್ಟುಕೊಳ್ಳುವುದೇ ಸಾಹಸ. ಪ್ರತಿಕ್ಷಣವೂ ತುಂಬ ಜತನವಾಗಿ ಮನೆಗೆ ಹೋಗುವ ದಿನವನ್ನ ಕಾಯುತ್ತಿದ್ದೆ. ನಿರ್ಧಾರ ಮಾಡಿದ ದಿನಕ್ಕಿಂತ ಎರಡು ದಿನ ಮುಂಚಿತವಾಗಿ ಹೊರಟುಬಿಟ್ಟೆ. ನನ್ನ ಮೇಲೆ ಅಷ್ಟು ನಂಬಿಕೆ ನನಗಿಲ್ಲ. ಹಾಗಾಗಿ ಬಸ್ಸಿನಲ್ಲಿ ಪಯಣ ಆರಂಭವಾಯಿತು. ಸಿಕ್ಕ ದುಡ್ಡನ್ನ ಏನು ಮಾಡುವುದು ಅನ್ನುವ ಲೆಕ್ಕಚಾರ ಆರಂಭವಾಯಿತು, ಒಂದಷ್ಟು ಹೊಸ ಆಲೋಚನೆಗಳು, ಹೊಸ ಆರಂಭಗಳನ್ನ ಶುರು ಮಾಡುವುದಕ್ಕೆ ಈ ದುಡ್ಡನ್ನ ಬಳಸಿಕೊಳ್ಳುವ ಅಂತ ಯೋಚನೆ ಮಾಡುತ್ತಾ ಮನೆಯನ್ನು ತಲುಪಿದೆ. ತಂಗಿ ಅದಕ್ಕೆ ಕಾಯುತ್ತಿದ್ದವಳಂತೆ ನನ್ನ ನೋಡಲು ನಾನು ಗೆದ್ದ ಹುಮ್ಮಸ್ಸಿನಲ್ಲಿ ಕಿಸೆಯಿಂದ ತೆಗೆದು ಎರಡು ಕೈಗಳನ್ನು ಅವಳ ಮುಂದೆ ಹಿಡಿದೆ. ಏನಾಶ್ಚರ್ಯ ಯಾವ ಬೆರಳಿನಲ್ಲೂ ಉಗುರು ಇಲ್ಲ. ಎಲ್ಲವೂ ಕಚ್ಚಿ ಖಾಲಿಯಾಗಿದೆ. ಯಾವಾಗ ?? ಅದೇ ಬಸ್ಸಿನಲ್ಲಿ ಬರುವಾಗ 5000ವನ್ನು  ಏನು ಮಾಡುವುದು ಎನ್ನುವ ಯೋಚನೆ ಇತ್ತಲ್ಲ ಆ ಕ್ಷಣದಲ್ಲಿ. ನನ್ನ ಕಡೆಯಿಂದ ಅದೇ ಹಣ ತಂಗಿಯ ಬಳಿಗೆ ಹೋಯಿತು. ನಾನು ಮಾತು ಉಳಿಸಿಕೊಂಡಿಲ್ಲ. ಅಯ್ಯೋ, ನನ್ನ ಕರ್ಮವೇ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ