ಸ್ಟೇಟಸ್ ಕತೆಗಳು (ಭಾಗ ೩೭೩) - ಪ್ರಸಾದ

ಪ್ರಸಾದ ಯಾಕೆ ಅಷ್ಟು ಸಿಹಿಯಾಗಿರುತ್ತದೆ? ನಾನು ಮನೆಯಲ್ಲಿ ಕೂಡ ಅದೇ ತರದ ವಸ್ತುಗಳನ್ನು ಹಾಕಿ ಅಷ್ಟೇ ಪ್ರಮಾಣದಲ್ಲಿ ನಳಪಾಕ ಮಾಡಿದರು ಕೂಡ ಪ್ರಸಾದದ ಸಿಹಿ ಮನೆಯಲ್ಲಿ ಸಿಗೋದಿಲ್ಲ. ಇದರಲ್ಲಿ ಏನು ವಿಶೇಷವಿದೆ? ಒಂದಾದರೆ ಆ ಪ್ರಸಾದಕ್ಕೆ ದೇವರು ಹತ್ತಿರದಲ್ಲಿ ಕುಳಿತು ಅದರ ಸ್ವಾದವನ್ನ ಸೇವನೆ ಮಾಡಿ ಮಾಡಿ ನಮಗೆ ನೀಡಿರಬೇಕು, ಆ ಕಾರಣಕ್ಕೆ ಅದಕ್ಕೆ ವಿಶೇಷ ರುಚಿ ತಟ್ಟಿರಬೇಕು ಅಥವಾ ದೇವರಪೂಜೆಗೆ ಬಂದಿರುವ ಎಲ್ಲರ ಭಕ್ತಿಯ ಸಮರ್ಪಣೆ ಅಥವಾ ದೇವರ ಕಾರ್ಯವಾದ್ದರಿಂದ ದೇವರ ಆಶೀರ್ವಾದಕ್ಕೆ ಪ್ರಸಾದ ಅನುಮತಿ ಪಡೆದುಕೊಂಡಿರಬಹುದು. ಕೈಗೆ ಸಿಗುವ ಚೂರು ಪ್ರಸಾದವನ್ನು ಕಣ್ಣಿಗೆ ಒತ್ತಿಕೊಂಡು ಸೇವಿಸುವ ನಾವು ತಟ್ಟೆಗೆ ಬೀಳುವ ಅನ್ನಕ್ಕೂ ಕೂಡ ಅಷ್ಟೇ ಗೌರವ ಕೊಟ್ಟರೆ ಒಳಿತಲ್ಲವೇ?. ಎರಡು ಕೂಡ ಬೆಳೆಯುವ ನೆಲ ಒಂದೇ ಆದರೆ ಇಲ್ಲಿ ಅದನ್ನು ಬಡಿಸುವ ಸ್ಥಳದ ಮಹಿಮೆ. ಪ್ರಸಾದಕ್ಕೆ ಹೇಗೆ ವಿಶೇಷವಾದ ಗೌರವವಿದೆಯೋ, ಆರಂಭದಿಂದ ಕೊನೆಯವರೆಗೂ ತನ್ನ ಸಿಹಿತನವನ್ನ ಕಳೆದುಕೊಳ್ಳದೆ ಎಲ್ಲರ ಮನಸ್ಸಿನೊಳಗೆ ಮತ್ತಷ್ಟು ಹೆಚ್ಚಿನ ಭಕ್ತಿ ಹುಟ್ಟುವಂತೆ ಮಾಡುವ ಪ್ರಸಾದದ ವಿಶೇಷತೆಯನ್ನ ಎಷ್ಟು ಹೇಳಿದರೂ ಸಾಲದು .
ನಾನೂ ಹೀಗಾಗಬೇಕು. ಭಾಗಿಯಾಗಬೇಕು ನನ್ನೊಳಗೆ ವಿಶೇಷವಾದ ಗುಣಗಳು ಸೇರಿಕೊಂಡಿರಬೇಕು ಎಲ್ಲರೂ ಪ್ರತಿಯೊಂದು ವಿಚಾರಕ್ಕೂ ನನ್ನನ್ನೇ ಕೇಳುವಂತಿರಬೇಕು ನಾನು ಪ್ರತಿಯೊಬ್ಬರೂ ಕಣ್ಣಿಗೊತ್ತಿಕೊಂಡು ಸೇವಿಸುವಂತಹ ಪ್ರಸಾರವಾಗಬೇಕು ಭಕ್ತಿ ಗೌರವಗಳು ಹೆಚ್ಚಾಗಿ ಎಲ್ಲರೂ ಜೊತೆಗೆ ಬದುಕುವಂತಾಗಬೇಕು .
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ