ಸ್ಟೇಟಸ್ ಕತೆಗಳು (ಭಾಗ ೩೭೪) - ಗಿಡ ಮರ

ಅಲ್ಲಾ ಈ ಗಿಡಗಳಿಗೆ ಬೇಸರವಾಗುವುದಿಲ್ಲವೇ? ಯಾಕೆಂದರೆ ಮಲ್ಲಿಗೆಯನ್ನು ಎಲ್ಲರೂ ತಲೆಗೆ ಮುಡಿತಾರೆ, ಎಲ್ಲ ಕಡೆಗೂ ಅದರ ಸುಗಂಧ ಹರಡುತ್ತಿದೆ. ಮಲ್ಲಿಗೆಯನ್ನು ಹುಡುಕಿ ನೋಡಿ ಮುದ್ದಿಸುತ್ತಾರೆ, ಪ್ರೀತಿಸುತ್ತಾರೆ ಆದರೆ ಅದರ ಗಿಡವನ್ನಲ್ಲ. ಗಿಡಕ್ಕೆ ಅಷ್ಟು ಮೌಲ್ಯ ಸಿಗುತ್ತಿಲ್ಲ ಅಂತ ಬೇಸರ ಆಗೋದಿಲ್ವಾ?
ಎಲ್ಲರಿಗೂ ಮಲ್ಲಿಗೆ ಇಷ್ಟವಾಗುತ್ತಾ ಹೋದ ಹಾಗೆ, ಗಿಡ ಅಸೂಯೆಯಿಂದ ಹೂವಾಗುವುದನ್ನ ಬಿಟ್ಟುಬಿಟ್ಟರೆ, ತಾನು ಬೇರಿನಿಂದ ಪಡೆದುಕೊಂಡ ಸತ್ವವನ್ನು ಹೂವಿಗೆ ದಾಟಿಸುತ್ತದೆ ಇಲ್ಲಿ ಗಿಡಕ್ಕೆ ಒಂದಷ್ಟು ಮೌಲ್ಯ ಸಿಗಬೇಕಲ್ಲ? ಹಾಗೇ ಮಾವಿನಮರಕ್ಕೇ, ಕಾಯಿಗೆ ಇರುವಷ್ಟು ಮೌಲ್ಯ ಸಿಗದಿರುವುದಕ್ಕೆ ಬೇಸರ ಆಗುವುದಿಲ್ಲವೇ ಕಾಯಿಗೆ ಹೊಡೆಯುವ ಕಲ್ಲು ಮರಕ್ಕೆ ತಾಗಿದಾಗ ತನ್ನದೇ ಕಾಯಿಯನ್ನು ಎಲ್ಲರೂ ಹೊಗಳಿ ಅಟ್ಟಕ್ಕೇರಿಸಿದಾಗ ತನ್ನನ್ನು ಯಾರೂ ಗಮನಿಸುತ್ತಿಲ್ಲ ಅನ್ನುವ ನೋವು ಅದಕ್ಕೆ ಕಾಡುವುದಿಲ್ಲವೇ? ಎಲ್ಲ ಕೆಲಸವನ್ನು ತಾನು ಮಾಡಿದ ಕಾರಣಕ್ಕೆ ಕಾಯಿ ಹುಟ್ಟುತ್ತದೆ, ಆದರೆ ಮರಕ್ಕಿಂತ ಹೆಚ್ಚು ಕಾಯಿಗೆ ಮೌಲ್ಯ ಇರುವಾಗ ಮರಕ್ಕೆ ನೋವಾಗುವುದು ಸಹಜ ಅಂದುಕೊಳ್ತೇನೆ. ಇದು ಒಂದು ಆಲೋಚನೆ .ಅದೇ ಮರಗಿಡ ಹೀಗೂ ಯೋಚಿಸಬಹುದು ಅಲ್ವಾ?. ಇದು ನಾನು ಬೆಳೆದ ನನ್ನ ಮಗು. ನನ್ನ ಮಗು ಹೊಸ ಸಾಧನೆ ಮಾಡಿದಾಗ ಜನರೆಲ್ಲಾ ಅವನನ್ನ ಹೊಗಳಿದಾಗ, ನಾನೇಕೆ ಅಸೂಯೆ ಪಡಲಿ. ನಾನು ಅವರನ್ನು ಇನ್ನಷ್ಟು ಪ್ರಸಿದ್ಧಿ ಹೊಂದುವಂತೆ ಎಲ್ಲರೂ ಪ್ರೀತಿಸುವಂತೆ ಮಾಡುವ ಕೆಲಸವನ್ನು ಮಾತ್ರ ಮಾಡುತ್ತೇನೆ .ಅದರ ಹೊರತು ಏನು ಬಯಕೆಯು ನನ್ನಲ್ಲಿಲ್ಲ .ಹೀಗೂ ಆಲೋಚಿಸಬಹುದು ಅಲ್ವಾ? ಅದೇನು ಆಲೋಚಿಸಿದೆಯೋ ಇಲ್ಲೋ ಗೊತ್ತಿಲ್ಲ. ಆದರೆ ನಾನಂತೂ ಎರಡು ವಿಧಾನದಲ್ಲಿ ಆಲೋಚಿಸಿದ್ದೇನೆ. ಸತ್ಯ ಯಾವುದು ಅಂತ ಮರ ಹೇಳಿದ್ರೂ ನನಗೆ ಅರ್ಥ ಆಗೋದಿಲ್ಲ. ಮತ್ತೆ ಏನ್ ಮಾಡೋದು..?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ