ಸ್ಟೇಟಸ್ ಕತೆಗಳು (ಭಾಗ ೩೭೬) - ಚಪ್ಪಲಿ

ಸ್ಟೇಟಸ್ ಕತೆಗಳು (ಭಾಗ ೩೭೬) - ಚಪ್ಪಲಿ

ದೇವರು ನೆಲೆಯಾಗಿರುವ ದೇವಸ್ಥಾನದ ಮುಂದೇ ಚಪ್ಪಲಿಗಳು ಹಾಗೆ ಬಿದ್ದಿವೆ. ದೇಗುಲದೊಳಕ್ಕೆ ಪ್ರವೇಶಿಸಿ ದೇವರಿಗೆ ಕೈ ಮುಗಿದು ಹೊರಗೆ ಬಂದೆ. ನನ್ನ ಚಪ್ಪಲಿಯನ್ನು ಧರಿಸುವಾಗ ಸುತ್ತ  ಚಪ್ಪಲಿಗಳು ಹಾಗೆ ಬಿದ್ದಿದೆ. ದೇವಸ್ಥಾನದ ಒಳಗೆ ಭೇಟಿಗೆ ಎಂದು ಬಂದವರು ಯಾರೂ ಇರಲಿಲ್ಲ. ಹಾಗಾದರೆ ಈ ಚಪ್ಪಲಿ ಯಾರದ್ದು. ಒಂದಾದರೆ ಇಲ್ಲಿಗೆ ಬಂದವರು ಬಿಟ್ಟು ಹೋಗಿರೋದು ಅಥವಾ  ತಮ್ಮದನ್ನ ಬಿಟ್ಟು ಬೇರೆಯವರದನ್ನು ಧರಿಸಿ ಹೊರಟಿರೋದು. ಇದೆರಡೇ ಸಾಧ್ಯತೆಗಳಿರುವುದು. ಪವಿತ್ರವಾದ ದೇವಾಲಯಕ್ಕೆ ಪುಣ್ಯವನ್ನು ಪಡೆಯಲು ಬಂದವರು ತಮ್ಮ ಪಾದಕ್ಕೆ ರಕ್ಷಣೆ ಕೊಟ್ಟ ಚಪ್ಪಲಿಗಳನ್ನು ತ್ಯಜಿಸಿ ಹೊರಡುವುದು ಇದೆಂತಹ ಮೂರ್ಖತನ. ದೇವರಿಂದ ಒಳಿತನ್ನು ಬೇಡಿ ಆತನಿಗೆ ಮಲಿನವನ್ನು ನೀಡಿ ಹೊರಡೋದು ಅದೆಷ್ಟು ಸರಿ? ಚೂರು ಗಲೀಜು ಇದ್ದರೆ ನಮಗೆ ಬದುಕೋ ಕಷ್ಟವಾಗಿರುವಾಗ, ನಾವು ಎಲ್ಲೆಲ್ಲಿಯೋ ಅಡ್ಡಾಡಿ ಬಂದ ಚಪ್ಪಲಿಯನ್ನು ಅವನ ಬುಡದಲ್ಲಿಟ್ಟು ಹೊರಟರೆ ಹೇಗೆ? ಚಪ್ಪಲಿ ಅಂತಲ್ಲ ದೇವಾಲಯದ ಪ್ರಾಂಗಣದಲ್ಲಿ, ನದಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಬಿಸುಟು ಹೊರಡುತ್ತೇವೆ. ಪ್ರಸಾದವನ್ನು ತಿಂದು, ಗಂಧವನ್ನು ಹಣೆಗೆ ಧರಿಸಿ ಪುಣ್ಯ ಸಂಪಾದಿಸಿದ ಸಂಭ್ರಮದಲ್ಲಿ ಇರುತ್ತೇವೆ. ಆದರೆ ಭಗವಂತನಿಗೂ ಗೊತ್ತಿರುತ್ತೆ ನಾವು ಮಾಡಿರುವ ಪಾಪಗಳ ಎಷ್ಟಾಗಿದೆ ಎಂತ. ಖಂಡಿತವಾಗಿಯೂ ಕೈಮುಗಿದರೆ ಒಲಿಯೋದಿಲ್ಲ. ಅದಕ್ಕೆ ದೊಡ್ಡವರು ಹೇಳಿದ್ದು ನಿನ್ನೊಳಗೆ ದೇವರು ಕಾಣೋ ಅಂತ.ಆಗ ನಮ್ಮನ್ನು ನಾವು ಮಲಿನ ಮಾಡಿಕೊಳ್ಳುವುದಿಲ್ಲ ಬೇರೆ ಯಾವುದನ್ನೂ ಮಲಿನವಾಗುವುದಕ್ಕೆ ಬಿಡುವುದಿಲ್ಲ. ಈ ಮನಸ್ಥಿತಿ ನಮ್ಮ ಬಂದಾಗ ಎಲ್ಲವೂ ಸರಿಯಾಗುತ್ತೆ. ಚಪ್ಪಲಿಗಳು ಅಂದುಕೊಂಡಿರಬಹುದು ಇಷ್ಟು ದಿನ ಅವನ ರಕ್ಷಿಸಿದ್ದಕ್ಕೆ ನಮಗಿಂತ ಉಡುಗೊರೆ ಕೊಟ್ಟ ಅಂತ. ಗುರುತು ಪರಿಚಯವಿಲ್ಲದ ಊರಲ್ಲಿ ಅನಾಥವಾಗಿ ಮಳೆ ಗಾಳಿ ಚಳಿ ಎನ್ನದೆ ಸೋಮಾರಿಗಳಾಗಿ ದಿನದೂಡುತ್ತಿವೆ. ಅವುಗಳ ಶಾಪವೇ ಆತನಿಗೆ ಸಾಕಾಗಲ್ವ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ