ಸ್ಟೇಟಸ್ ಕತೆಗಳು (ಭಾಗ ೩೭೭) - ದೇವಾ

ನೆಲದ ಮೇಲೆ ನೆಲೆಯಾಗಿರುವ ದೇವರಲ್ಲೊಂದು ಬೇಡಿಕೆ, ದೇವರೇ ನೆಲವನ್ನು ಬಿಟ್ಟು ಎತ್ತರದ ಬೆಟ್ಟದ ಮೇಲೆ ಹೋಗಿ ನೆಲೆಯಾಗು. ಅಲ್ಲೇ ಬಂದ ಭಕ್ತರಿಗೆ ಆಶೀರ್ವಾದ ಮಾಡು. ಆಲಯದೊಳಗೆ ತಲುಪಬೇಕಾದರೆ ಅಲ್ಲಿಗೆ ರಸ್ತೆ ಇರಬಾರದು, ಎಲ್ಲರೂ ಮೆಟ್ಟಿಲುಗಳನ್ನ ಹತ್ತಿಯೇ ಸಾಗಬೇಕು. ಅಲ್ಲಿ ಎಲ್ಲರಿಗೂ ಒಂದೇ ತರಹದ ಪ್ರಸಾರ ಸಿಗಬೇಕು. ಹೆಚ್ಚು ದುಡ್ಡು ಕೊಟ್ಟವನಿಗೆ ಮುಂದುಗಡೆ ಬಾಗಿಲು ಬೇಗ ತೆರೆಯುವಂತೆ ಆಗಬಾರದು. ದೇವನೊಬ್ಬ ಎಲ್ಲರನ್ನು ಜೊತೆಯಾಗಿ ಹರಸುವಂತಾಗಬೇಕು. ದೇವ ಅಂತಹ ಸ್ಥಳದಲ್ಲಿ ನೀನು ನೆಲೆಯಾಗಿ ಬಿಡು. ದೇವ ನಿನ್ನ ಕಾಲಿನ ಕೆಳಗಿನಿಂದ ಹರಿಯುವ ನದಿ ಸುಲಲಿತವಾಗಿ ನೀರನ್ನ ತನ್ನೊಳಗೆ ಇಟ್ಟುಕೊಂಡು ಮಲಿನವಾಗದೆ ಊರಲ್ಲವನ್ನ ಹಸಿರು ಮಾಡಿ ಸಮುದ್ರವನ್ನು ತಲುಪಲಿ. ನಿನ್ನ ಬೆಟ್ಟವ ಸುತ್ತುವರಿದ ಹಸಿರು ಕಾನನಗಳು ವರ್ಷಕ್ಕೆ ಮೆಳೆಯನ್ನ ತರಲಿ.
ಭಗವಂತ ನೀನ್ನನ್ನ ಎಲ್ಲೆಂದರಲ್ಲಿ ಸ್ಥಾಪಿಸಿದವರಿಗ ನೀ ಹೇಳಲೇಬೇಕು. ಸುಲಭವಾಗಿ ನೀನು ದಕ್ಕಿದರೆ ಮೌಲ್ಯ ತಿಳಿಯೋದಿಲ್ಲ .ಹಾಗಾಗಿ ನೀನು ಏರಿದ ಎತ್ತರವನ್ನು ತಲುಪಲು ಕಷ್ಟಪಡಬೇಕು ಅನ್ನೋ ಅರಿವು ನಮ್ಮೊಳಗೆ ಇಳಿಯಲು ನೀನು ಎತ್ತರದಲ್ಲಿ ನೆಲೆಯಾಗು. ನಾನು ಕಷ್ಟಪಟ್ಟು ಶ್ರಮವಹಿಸಿ ಕೈಮುಗಿದು ನನಗೆ ಅಗತ್ಯವಾದುದನ್ನು ಬೇಡುತ್ತೇನೆ. ನಿನಗೆ ಗೊತ್ತಿದೆ ನನಗೇನು ನೀಡಬೇಕು ಅಂತ ಆದರೂ ಹೇಳುವುದು ನನ್ನ ಧರ್ಮ. ನನ್ನ ಮಾತು ನಿನಗೆ ಕೇಳಿಸಿದೆ ಅಂದುಕೊಂಡಿದ್ದೇನೆ. ಯಾಕೆಂದರೆ ನಾನು ಅಂದುಕೊಂಡಿರುವುದು ನೀನು ನನ್ನೊಳಗೆ ಇದ್ದೀಯಾ .ನಿನ್ನನ್ನ ದೇವಳದೊಳಗೆ ಕಾಣದೇನಕ್ಕೆ ಅಂತಂದ್ರೆ, ನಿನಗೊಂದು ರೂಪವಿದೆ. ಆರೋಪವನ್ನ ನನ್ನೊಳಗೆ ಆಗಾಗ ಸ್ಥಿರವಾಗಿರಿಸಲು ಬರಲೇಬೇಕು. ದೇವ ನೀನು ಎತ್ತರದಲ್ಲೇ ನೆಲೆಯಾಗು …
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ