ಸ್ಟೇಟಸ್ ಕತೆಗಳು (ಭಾಗ ೩೭೮) - ಬದುಕು

ಸ್ಟೇಟಸ್ ಕತೆಗಳು (ಭಾಗ ೩೭೮) - ಬದುಕು

ಅದೊಂದು ಫ್ಯಾಶನ್ ಶೋ ಅಲ್ಲಿ ಅದ್ಭುತವಾದ ವಸ್ತ್ರವಿನ್ಯಾಸಗಳು ಸುಂದರವಾದ ಹುಡುಗಿಯರು, ಹುಡುಗರನ್ನ ಅಲಂಕರಿಸಿ ವೇದಿಕೆಯ ಮೇಲೆ ಪ್ರದರ್ಶನದ ರೀತಿಯ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಸುಂದರವಾದದ್ದು ಅಲ್ಲಿ ಕ್ಯಾಮರಾಗಳ ಫೋಟೋಗಳಲ್ಲಿ ದಾಖಲಾಗುತ್ತಿದೆ. ಅಲ್ಲಿ ವೇದಿಕೆಯ ಮೇಲೆ ನಿಂತ ಎಲ್ಲರೂ ಪ್ರತಿದಿನವೂ ಹಾಗೆ ಬದುಕುವುದಿಲ್ಲ. ಕಾರ್ಯಕ್ರಮಕ್ಕೆ ಬೇಕಾಗಿ ಆ ತರಹದ ಸುಂದರ ದಿರಿಸುಗಳನ್ನು ಧರಿಸಿದ್ದಾರೆ. ಅವರ ಸುಂದರ ಗಳಿಗೆಗಳು ಮಾತ್ರ ತೋರಿಸಿದ ಹಾಗೆ ನಾವು ಕೂಡ ನಮ್ಮ ಜೀವನ ಸುಂದರ ಕ್ಷಣಗಳನ್ನು ಮಾತ್ರ ತೋರಿಸುತ್ತೇವೆ. ಇನ್ನೊಬ್ಬರಿಗೆ ತೋರಿಸಲೆಂದೇ ನಮ್ಮ ಮೊಬೈಲ್ ಸ್ಟೇಟಸ್ ಗಳಲ್ಲಿ, ಪೇಸ್ಬುಕ್ಕು ವಾಟ್ಸಪ್ಪುಗಳಲ್ಲಿ ಎಲ್ಲಾಕಡೆ ನಮ್ಮ ಸುಂದರತೆ, ಖುಷಿಯ ಕ್ಷಣಗಳನ್ನು, ನಾವು ಅಂದವಾಗಿ ಕಾಣುವುದನ್ನು ಮಾತ್ರ ದಾಖಲಿಸಿ ಜನರ ಮುಂದಿಟ್ಟಿರುತ್ತೇವೆ. ಯಾಕೆ? ನಮ್ಮ ನೋವು, ನಮ್ಮ ಕುರೂಪ, ನನ್ನ ಪಾಡುಗಳನ್ನ ಯಾಕೆ ಎಲ್ಲರ ಮುಂದೆ ಪ್ರದರ್ಶನಕ್ಕೆ ಇಡುವುದಿಲ್ಲ. ಯಾಕೆಂದರೆ ನಮಗೆ ಎದುರಿನಿಂದ ಬೇಕಾಗಿರುವುದು "ಎಷ್ಟು ಸುಂದರವಾಗಿದೆ" "ನೀವು ಅದ್ಭುತ" ಅನ್ನುವ ಹೊಗಳಿಕೆಯ ಮಾತುಗಳು ಮಾತ್ರ. ನಮ್ಮನ್ನ ಪೂರ್ತಿಯಾಗಿ ತೆರೆದಿಡದೆ ಅರ್ಧಭಾಗವನ್ನು ತೆರೆದಿಟ್ಟು ಜನಾ ನಮ್ಮನ್ನ ಅರ್ಥಮಾಡಿಕೊಳ್ಳುತ್ತಿಲ್ಲ ಅಂತ ಬಯಸುವುದು ಎಷ್ಟು ಸರಿ. ಅದು ಅಲ್ದೇ ನಮ್ಮನ್ನ ಪೂರ್ತಿಯಾಗಿ ತೆರೆದಿಟ್ಟು ಬಿಟ್ಟರೆ ಬದುಕು ಮುಂದುವರೆಯುವುದು ಹೇಗೆ ಅಲ್ವಾ ?ನಮಗೆ ನಮ್ಮ ಚಂದದ ಫೋಟೋಗಳನ್ನೇ ಎಲ್ಲಾ ಕಡೆ ತೋರಿಸಬೇಕು ಹಾಗಿರುವಾಗ ಬದುಕನ್ನು ಸುಂದರವಾಗಿ ಮಾಡಿಕೊಂಡರೆ ಬದುಕನ್ನು ಇನ್ನೊಂದು ನಾಲ್ಕು ಜನರಿಗೆ ತೋರಿಸಬಹುದಾಗಿದೆ. ಹೀಗೆ ಬದುಕಬೇಕು ಅಂತ ಅಂದುಕೊಂಡರೆ ಹಾಗೆ ಬದುಕಿದರೆ ಸಾಕು ಮತ್ತೆ ನಾಳೆ, ಮುಂದೆ, ಈ ಯೋಚನೆಗಳನ್ನು ಯೋಚಿಸುತ್ತಾ ವರ್ತಮಾನವನ್ನು ಕಳೆದುಕೊಂಡುಬಿಟ್ಟರೆ ಬದುಕು ಸುಂದರವಾಗಿರುವುದಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ