ಸ್ಟೇಟಸ್ ಕತೆಗಳು (ಭಾಗ ೩೮೧) - ಕುರಿ

ಸ್ಟೇಟಸ್ ಕತೆಗಳು (ಭಾಗ ೩೮೧) - ಕುರಿ

ರಸ್ತೆಯಲ್ಲಿ ಚಲಿಸುವಾಗ ಕೈಯಲ್ಲೊಂದು ಮೊಬೈಲ್ ಹಿಡುಕೊಂಡು ಅದನ್ನೇ ನೋಡ್ತಾ ಹೋಗ್ತಾ ಇರುತ್ತೇನೆ. ಆದರೆ ಇವತ್ತು ಮೊಬೈಲ್ ಚಾರ್ಜ್ ಖಾಲಿ ಆಗಿತ್ತು. ಹಾಗಾಗಿ ಸುತ್ತಮುತ್ತ ಗಮನಿಸಿದೆ. ಕರೆಂಟ್ ಕಂಬದ ಕೆಳಗೊಂದು ಕುರಿ ಹುಲ್ಲು ತಿನ್ನುತ್ತಿತ್ತು. ಅದರ ಮೇಲೆ ಕುಳಿತ ಎರಡು ಹಕ್ಕಿಗಳು ಕುರಿಯ ಮೈಮೇಲಿನ ಒಂದಷ್ಟು ರೋಮಗಳನ್ನು ತಮ್ಮ ಕೊಕ್ಕಿನಿಂದ ಕಿತ್ತುಕೊಂಡು ಹಾರಿಹೋಗುತ್ತಿದ್ದವು. ಮತ್ತೊಂದಷ್ಟು ಕ್ಷಣ ಕಳೆದು ಮತ್ತೆ ಒಂದು ಇನ್ನೊಂದಷ್ಟು ಕಿತ್ತುಕೊಂಡು ಹಾರಿಹೋಗುತ್ತಿದ್ದವು. ಕುರಿಯ ದೇಹದ ಒಂದೇ ಕಡೆಯಿಂದ ಅಷ್ಟು ರೋಮಗಳನ್ನು ಕೀಳದೆ, ದೇಹದ ಬೇರೆ ಬೇರೆ ಭಾಗಗಳಿಂದ ರೋಮಗಳನ್ನು ತೆಗೆದುಕೊಂಡು ಹೋಗುತ್ತಿದ್ದವು. ನನಗೆ ಈ ಕುತೂಹಲವನ್ನು ತಡೆದುಕೊಳ್ಳಲಾಗಲಿಲ್ಲ ಕುರಿಯ ಬಳಿ ನಿಂತು ಕೇಳಿದೆ. ಅಲ್ಲ ಮಾರಾಯ ಆ ಹಕ್ಕಿಗಳು ನಿನ್ನ ದೇಹದಿಂದ ರೋಮಗಳ ಕಿತ್ತುಕೊಂಡು ಹೋಗುತ್ತಿದ್ದಾವೆ. ಆದರೂ ನೀನು ಏನೂ ಮಾಡದೇ ಸುಮ್ಮನೆ ಇದ್ದೀಯಾ?  ನಿನ್ನ ದೇಹದ ರೋಮ ಖಾಲಿಯಾಗುವವರೆಗೂ ಅವರು ಕೀಳುತ್ತಲೇ ಇರುತ್ತಾರೆ ಏನು ಮಾಡ್ತೀಯಾ? ನಿನಗೆ ನಿನ್ನ ಜೀವ ಬೇಡ್ವಾ ?

ಅದಕ್ಕೆ ಕುರಿ,"ಓ ಮನುಷ್ಯ ಮಾರಾಯ ಆ ಹಕ್ಕಿಗಳು ಮನುಷ್ಯರಲ್ಲ. ಹಕ್ಕಿಗಳಿಗೆ ತಮ್ಮ ಗೂಡುಕಟ್ಟಲು ಎಷ್ಟು ಬೇಕೋ, ಅಷ್ಟನ್ನು ಮಾತ್ರ ಕೀಳುತ್ತವೇ. ಅದು ದೇಹದ ಬೇರೆ ಬೇರೆ ಭಾಗಗಳಿಂದ ಕಿತ್ತು ನನಗೇನು ತೊಂದರೆಯಾಗದ ಹಾಗೆ ನೋಡಿಕೊಳ್ಳುತ್ತದೆ. ಅದಲ್ಲದೆ ಆ ಹಕ್ಕಿಗಳಿಗೆ ತನ್ನ ಮಕ್ಕಳಿಗೆ,ಮೊಮ್ಮಕ್ಕಳಿಗೆ ಹೀಗೆ ಎಲ್ಲರಿಗೂ ಮಾಡಿಟ್ಟು ಬಿಡುವ ಅಭ್ಯಾಸವಿಲ್ಲ. ತನಗೆ ಎಷ್ಟು ಬೇಕೋ ಅಷ್ಟಕ್ಕೆ ಮಾತ್ರ ರೋಮವನ್ನು ಕೀಳುತ್ತದೆ. ನೀವು ಮನುಷ್ಯರು ಹಾಗಲ್ಲ, ನಿಮ್ಮ ಇಡೀ ಮುಂದಿನ ಜನಾಂಗಕ್ಕೂ ಬೇಕಾಗುವಷ್ಟು ಸಂಪಾದಿಸುತ್ತೀರಿ ? ಸಿಕ್ಕಿದರಲ್ಲಿ ತೃಪ್ತಿಯು ಇಲ್ಲವೇ ಇಲ್ಲ? ಮನುಷ್ಯರಾದರೆ ನಾನು ಪ್ರತಿರೋಧ ಒಡ್ಡುತ್ತಿದ್ದೆ. ಪ್ರಾಣಿಗಳು ಒಬ್ಬರಿಗೊಬ್ಬರು ಸಹಕಾರ ಕೊಟ್ಟುಕೊಂಡು ಬದುಕುತ್ತೇವೆ ಯಾಕೆಂದರೆ ನಾವು ಮನುಷ್ಯರಲ್ಲ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ