ಸ್ಟೇಟಸ್ ಕತೆಗಳು (ಭಾಗ ೩೮೨) - ಕೊಂಡಿ

ಸ್ಟೇಟಸ್ ಕತೆಗಳು (ಭಾಗ ೩೮೨) - ಕೊಂಡಿ

ಪ್ರಾಂಶುಪಾಲರು ಎರಡು-ಮೂರು ಬಾರಿ ಹೇಳಿದರು, ಪರೀಕ್ಷೆಯ ಸಂಖ್ಯೆಗಳನ್ನು ಹಾಕುವಾಗ ಸರಿಯಾಗಿ ನೋಡಿ ಬರೆಯುತ್ತಾ ಹೋಗು. ಮತ್ತೆ ಮತ್ತೆ ಪರೀಕ್ಷಿಸಿ ನೋಡಿ ಮುಂದುವರೆ, ಸ್ವಲ್ಪ ಸಮಯವಾದರೂ ತೊಂದರೆ ಇಲ್ಲ.  ತಪ್ಪು ಮಾಡಬೇಡ ಅಂತ. ನಾನಂದುಕೊಂಡೆ "ಈ ನಂಬರ್ ಹಾಕೋದು ಅದೇನು ಅಷ್ಟು ದೊಡ್ಡ ವಿಷಯ ಅಲ್ಲ .ಕ್ರಮ ಪ್ರಕಾರವಾಗಿ ಸಂಖ್ಯೆಯನ್ನು ಬರೆಯುತ್ತಾ ಹೋದರೆ ಸಾಕು. ಅದರಲ್ಲಿ ಆಳವಾಗಿ ನೋಡುವಂತದ್ದೇನಿದೆ. ಸಂಖ್ಯೆಗಳನ್ನ ಹಾಕುತ್ತಾ ಹಾಕುತ್ತಾ  ಒಟ್ಟು 8 ತರಗತಿಗಳಲ್ಲಿ ಪರೀಕ್ಷೆ ಬರೆಯಲು ಸಂಖ್ಯೆಗಳನ್ನು ಹಾಕಿಯಾಗಿತ್ತು. ಆದರೂ ಮತ್ತೊಮ್ಮೆ ಹಾಕಿದ ಸಂಖ್ಯೆಯನ್ನು ಪರೀಕ್ಷಿಸುವ ಅಂತ ಮತ್ತೊಮ್ಮೆ ತಿರುಗಿ ಎಲ್ಲ ತರಗತಿಗಳನ್ನು ನೋಡುತ್ತಾ ಬಂದಾಗ ಒಂದು ತರಗತಿಯಲ್ಲಿ ಒಂದು ಸಂಖ್ಯೆಯನ್ನು ಬಿಟ್ಟುಬಿಟ್ಟಿದ್ದೆ. ಅದನ್ನು ಉಜ್ಜಿ ಸರಿಪಡಿಸೋಣ ಎಂದರೆ ಅದಕ್ಕಿಂತ ಮುಂದುವರೆದ ಎಲ್ಲ ತರಗತಿಗಳ ಸಂಖ್ಯೆಯನ್ನು ಅಳಿಸಿ ಮತ್ತೆ ಬರೆಯಬೇಕು. ಮೊದಲೇ ಸಂಜೆಯಾಗಿತ್ತು ಕೆಲಸ ಮುಗಿಸುವಾಗ ರಾತ್ರಿಯಾಗಿ ಹೋಯಿತು. ಆ ಸಂಖ್ಯೆಯ ಕೊಂಡಿಯೊಂದು ತಪ್ಪಿದ್ದಕ್ಕೆ. ಸಮಯವೂ ಹಾಳು ಕೆಲಸವು ಹಾಳು. ಅದಕ್ಕೆ ಪ್ರಾಂಶುಪಾಲರು ಹೇಳಿದ್ದು ಸರಿಯಾಗಿ ನೋಡಿಕೊಂಡು ಮುಂದುವರೆ ಅಂತ. ಸಂಬಂಧಗಳು ಕೂಡ ಹಾಗೆ ಒಂದೆಡೆ ಕೊಂಡಿ ತಪ್ಪಿದರೆ ಮತ್ತೆ ಜೋಡಿಸುವುದು ಕಷ್ಟ. ಹೇಗಾದರೂ ಕೊನೆಗೆ ಜೋಡಿಸಿದರೂ ಕಳೆದ ಸಮಯ, ಜೊತೆಗೆ ಇರಬೇಕಾದ ಬಾಂಧವ್ಯ, ಎಲ್ಲವೂ ನಮ್ಮನ್ನ ಬಿಟ್ಟು ದೂರ ಚಲಿಸಿರುತ್ತದೆ. ಹಾಗಾಗಿ ಪ್ರತಿಯೊಂದು ಮಾತಿನಲ್ಲೂ ವಿಚಾರದಲ್ಲೂ ಅರ್ಥ ಮತ್ತು ಗಾಢತೆ ಇರ್ಲೇಬೇಕು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ