ಸ್ಟೇಟಸ್ ಕತೆಗಳು (ಭಾಗ ೩೮೫) - ಊಟ

ಸ್ಟೇಟಸ್ ಕತೆಗಳು (ಭಾಗ ೩೮೫) - ಊಟ

ಕಾರ್ಯಕ್ರಮ ಯಾರದ್ದು ದೊಡ್ಡವರದ್ದು.  ಊಟಕ್ಕೆ ಸರತಿ ಸಾಲು ಆರಂಭವಾಗಿದೆ. ಅವರಿಬ್ಬರಿಗೆ ನಡೆಯುವುದಕ್ಕೂ ತುಂಬಾ ಕಷ್ಟವಾಗುತ್ತಿದೆ. ಹಲೋ ವರ್ಷಗಳಿಂದ ಜೊತೆಯಾಗಿ ಜೀವನ ಸಾಗಿಸುತ್ತಿದ್ದವರು. ಇವತ್ತು ಜೊತೆಯಾಗಿ ಹೊಟ್ಟೆ ತುಂಬಾ  ಊಟ ಮಾಡುವ ಮನಸ್ಸಿನಿಂದ ಆಗಮಿಸಿದ್ದಾರೆ. ಅವರಿಬ್ಬರ ಬಟ್ಟೆಗಳು ಅಷ್ಟೇನೂ ಅಂದವಾಗಿಲ್ಲ. ದೇಹದಲ್ಲಿ ನಡೆಯುವುದಕ್ಕೂ ಶಕ್ತಿಯೂ ಇಲ್ಲ. ಸಣ್ಣ ೨ ಚೀಲಗಳನ್ನು ಹೆಗಲ ಮೇಲೆ ಹಾಕಿಕೊಂಡು ಬಂದಿದ್ದಾರೆ. ಗಂಡ ಹೆಂಡತಿ ಇಬ್ಬರೂ ಸರತಿ ಸಾಲಿಗೆ ಸೇರಿಕೊಂಡರು. ಅವರ ಊಟ ಮಾಡುವ ಸಾಮರ್ಥ್ಯಕ್ಕಿಂತ ಹೆಚ್ಚಿನದನ್ನು ಬಡಿಸಿಕೊಂಡು ಬಂದು ಮೂಲೆಯಲ್ಲಿ ನಿಂತು ಅದರಲ್ಲಿ ಒಂದು ಭಾಗವನ್ನು ಇಬ್ಬರು ಊಟ ಮಾಡಿದರು. ಊಟಕ್ಕೆ ಅವರ ಕಣ್ಣೀರುಗಳು ಸೇರುತ್ತಿದ್ದವು. ಅದರಲ್ಲಿ ಒಂದಷ್ಟು ಭಾಗವನ್ನು ಚೀಲಕ್ಕೆ ತುಂಬಿಸಿಕೊಂಡರು. ಮತ್ತೆ ಹೋಗಿ ಸರತಿ ಸಾಲಿನಲ್ಲಿ ನಿಂತು ಮತ್ತೊಂದಷ್ಟು ಅನ್ನ-ಸಾಂಬಾರ್ ತೆಗೆದುಕೊಂಡು ಲಕೋಟೆಗೆ ತುಂಬಿಸಿದರು. ಕೊನೆಗೆ ಕೈ ತೊಳೆದು ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ನಿಧಾನವಾಗಿ ಕಾರ್ಯಕ್ರಮದಿಂದ ಮನೆ ಕಡೆಗೆ ಹೊರಟರು. ಈ ಭಾಗ್ಯ ತಿಂಗಳಿಗೆ ಎರಡು ಮೂರು ಸಲ ಸಿಗುತ್ತೆ. ಇಲ್ಲವಾದಲ್ಲಿ ಉಪವಾಸವೇ ಅವರ ಪ್ರತಿದಿನದ ಆಪ್ತ ಸ್ನೇಹಿತನಾಗಿದ್ದ. ಇವರ ದೇಹ ಶಕ್ತಿಗೆ ಕೆಲಸ ಸಿಗುವುದಿಲ್ಲ. ಮಕ್ಕಳು ಊರು ಬಿಟ್ಟ ಮೇಲೆ ಅವರ ಸುದ್ದಿ ಇಲ್ಲ. ಈಗ ಒಬ್ಬರಿಗೊಬ್ಬರು ಆಸರೆಯಾಗಲೇ ಬೇಕು. ಹಾಗಾಗಿ ಆಗಾಗ ಕಾರ್ಯಕ್ರಮಗಳಿಗೆ ನಡೆದು ಕೊಂಡೇ ಹೋಗಿ ಆ ಮೂರು ನಾಲ್ಕು ದಿನದ ಊಟವನ್ನು ತೆಗೆದುಕೊಂಡು ಒಂದು ಬದುಕುತ್ತಿದ್ದಾರೆ. ಅವರಿಗೆ ಮಕ್ಕಳ ಓದಿನ ಬಗ್ಗೆ ಹೆಮ್ಮೆಯಿದೆ. ಕೆಲಸದ ಬಗ್ಗೆ ಹೆಮ್ಮೆ ಇದೆ. ಆದರೆ ಮಾನವೀಯತೆ ಇಲ್ಲದಿರುವ ಬಗ್ಗೆ ಕನಿಕರವಿದೆ. ಕಷ್ಟಪಟ್ಟು ಬೆಳೆಸಿದ್ದು ಇಂತಹ ಮಕ್ಕಳನ್ನಾ ಎನ್ನುವ ಸಂಶಯವಿದೆ. ಆಸರೆಯಾಗದ ಮಕ್ಕಳು ಇದ್ದರೆಷ್ಟು ಬಿಟ್ಟರೆಷ್ಟು ಎನ್ನುವ ನೋವಿದೆ..... ಮರುದಿನದ ಕಾರ್ಯಕ್ರಮವನ್ನು ಹುಡುಕಿ ಹೊರಟಿದ್ದಾರೆ, ಯಾಕೆಂದರೆ ಹಸಿವು ಮಾತನಾಡಿಸುತ್ತದೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ