ಸ್ಟೇಟಸ್ ಕತೆಗಳು (ಭಾಗ ೩೮೭) - ನಾಯಿ

ಥೂ ನಿಮ್ಮ ಜನ್ಮಕ್ಕೆ ...ಅದ್ಯಾವುದು ಚಲನಚಿತ್ರ ನೋಡಿ ಬಂದಿದ್ದೀರಿ ಅಥವಾ ಎಲ್ಲೋ ಹೇಳಿದ್ದನ್ನು ಕೇಳಿದ್ದೀರಿ, ಎಲ್ಲಾ ಕಡೆ ಒಬ್ಬ ಅತ್ಯುತ್ತಮ ನಾಯಿ ಪ್ರೇಮಿ ಅಂದುಕೊಂಡು ದೊಡ್ಡ ದೊಡ್ಡ ಮಾತುಗಳ ಸುಂದರವಾದ ವಿಡಿಯೋಗಳನ್ನು ನಿಮ್ಮ ಮೊಬೈಲ್ ನಲ್ಲಿ ಹಾಕಿ "ಅವರದ್ದು ಒಂದು ಬದುಕು, ಬದುಕಲು ಬಿಡಿ ಅಂತೆಲ್ಲ ಹೇಳ್ತಾ ಇದ್ದೀರಿ". ಒಂದು ತಿಂಗಳ ಹಿಂದೆ ನಿಮ್ಮ ಮನೆಯ ಮುಂದೆ ನಾನು ಬಂದಾಗ ಹೊಟ್ಟೆ ಹಸಿವಿನಿಂದ ನರಳುತ್ತಿದ್ದೆ. ಅವತ್ತು ನಿಮ್ಮಲ್ಲಿ ಕೇಳಿಕೊಂಡಾಗ ಅನ್ನ ಹಾಕದೆ, ನೀರು ನೀಡದೆ ಕಲ್ಲಲ್ಲಿ ಹೊಡೆದು, ಕೋಲಲ್ಲಿ ಹೊಡೆದು ಓಡಿಸಿದವರು ನೀವೇ ಅಲ್ವಾ? ನಾನು ನನ್ನ ಮರಿಗಳಿಗೆ ಮಲಗಲು ಒಂಚೂರು ಜಾಗ ಕೊಡಿ, ಮಳೆ ಬರುತ್ತಿದೆ ಅಂತ ಕೇಳಿ ಕೊಂಡಿದ್ದಕ್ಕೆ ಸಹಾ ಸ್ವಲ್ಪವೂ ಕನಿಕರವಿಲ್ಲದೆ ಮನೆಯವರೆಲ್ಲ ಸೇರಿ ಯಾವುದೋ ಗೋಣಿಯಲ್ಲಿ ತುಂಬಿಸಿ ನನ್ನ ಮರಿಗಳನ್ನು ಎಲ್ಲೂ ಬಿಟ್ಟು ಬಂದವರು ನೀವೇ ಅಲ್ವಾ? ಹಸಿದಾಗ ಎಲ್ಲೋ ಒಂದು ಕಡೆ ತಿಂತಾ ಇದ್ರೆ ಕಲ್ಲು ಹಿಡಿದು ಓಡಿಸಿದವರು ನೀವಲ್ವಾ? ಬರಿಯ ನೋವನ್ನೇ ನೀಡಿ, ಮಕ್ಕಳಿಂದ ನನ್ನನ್ನು ದೂರ ಮಾಡಿ, ಅವರು ಬದುಕಿದ್ದಾರೋ, ಸತ್ತಿದ್ದಾರೋ ಅನ್ನೋದನ್ನ ತಿಳಿಯದ ಹಾಗೆ ತಾಯಿಯನ್ನು ದೂರ ಮಾಡಿದ ಪಾಪಿಗಳು ನೀವೇ ಅಲ್ವಾ? ಹಾಗಿದ್ದ ಮೇಲೆ ಈಗ ಪ್ರಾಣಿ ಪ್ರೇಮಿ ತರಹ ಅದ್ಯಾಕೆ ಪೋಸ್ ಕೊಡುತ್ತೀರಿ? ಮೊದಲು ನಿಮ್ಮ ಸುತ್ತಮುತ್ತ ಕಣ್ಣು ಬಿಟ್ಟು ನೋಡಿ ನೀವು ಚಲನಚಿತ್ರದಲ್ಲಿ ನೋಡಿದಂತಹ ಸಾವಿರಾರು ಪ್ರಾಣಿಗಳು ಕಣ್ಣಮುಂದೆಯೇ ಓಡಾಡುತ್ತಿರುತ್ತವೆ. ಚೂರು ನೀರು ನೀಡಿ, ತಿನ್ನೋಕೆ ಏನಾದರೂ ಕೊಡಿ. ಸಾಧ್ಯವಿಲ್ವಾ... ಅದರ ಪಾಡಿಗೆ ಅದನ್ನು ಬಿಟ್ಟು ಬಿಡಿ .ನಿಮ್ಮತ್ರ ಕೇಳಿಕೊಳ್ಳುವುದಿಷ್ಟೆ ನನಗೆ ಇನ್ನೂ ನೋವಿದೆ ನನ್ನ ಮಕ್ಕಳನ್ನು ನನ್ನಿಂದ ದೂರ ಮಾಡಿದ್ದಕ್ಕೆ, ಹಾಲು ಕುಡಿಯುತ್ತಿರುವ ಪ್ರೀತಿಯ ಘಳಿಗೆಯಲ್ಲಿ ಹೊಡೆದು ಓಡಿಸಿದ್ದಕ್ಕೆ, ಆ ಮರಿಗಳ ಆಕ್ರಂದನದ ಕೂಗು ಇನ್ನೂ ಕೇಳಿಸುತ್ತಿದೆ. ಆದರೆ ಆ ದೂರವನ್ನು ನನಗೆ ತಲುಪಲಾಗುತ್ತಿಲ್ಲ. ನೀವು ನನ್ನನ್ನು ಅಲ್ಲಿಗೆ ಹೋಗಿ ಬಿಡುತ್ತಾನೂ ಇಲ್ಲ. ನೀನಿಷ್ಟು ಕ್ರೂರಿ ಅಂತ ನಾನು ಅಂದುಕೊಂಡಿರಲಿಲ್ಲ ಮಾನವಾ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ