ಸ್ಟೇಟಸ್ ಕತೆಗಳು (ಭಾಗ ೩೮೮) - ಹಸಿವು

ಸ್ಟೇಟಸ್ ಕತೆಗಳು (ಭಾಗ ೩೮೮) - ಹಸಿವು

"ನನ್ನ ಮಗ ಮುಂದೇನು ಮಾಡ್ತಾನೋ ದೇವರಿಗೇ ಗೊತ್ತು. ಜವಾಬ್ದಾರಿ ಏನೂ ಇಲ್ಲ.‌ ಓದು ತಲೆ ಹತ್ತುತ್ತಿಲ್ಲ. ಹೀಗಾದರೆ ಬದುಕು ಹೇಗೆ." ಚಿಂತೆಯಲ್ಲಿದ್ದರು ಸುಂದರಣ್ಣ. ಇದೇ ಮಾತನ್ನ ಅವರ ಗೂಡಂಗಡಿಗೆ ಬರುವ ಎಲ್ಲಾ ಜನರಲ್ಲಿ ಹೇಳ್ತಾನೇ ಇದ್ರು. ಅವರದ್ದು ಸಣ್ಣ ಅಂಗಡಿ. ಅಲ್ಲಿ ಆಮ್ಲೇಟ್, ಕಡ್ಲೆ, ಬೋಂಡಾ ಹೀಗೆ ಹಸಿದ ಬಡವನಿಗೆ ಕಡಿಮೆ‌ ದುಡ್ಡಿನಲ್ಲಿ ಹೊಟ್ಟೆ ತುಂಬಾ ತಿನ್ನೋಕೆ ಸಿಗುತ್ತಿದ್ದದ್ದು ಇಲ್ಲಿ‌ಮಾತ್ರ.‌ ಜೊತೆಗೆ ಮಾತೂ ಕೂಡಾ ಹಾಗೇ, ಪ್ರೀತಿ ಹಾಸ್ಯದ ಜೊತೆಗೆ, ಬಂದ ಪ್ರತಿಯೊಬ್ಬರ ಯೋಗ ಕ್ಷೇಮ ವಿಚಾರಿಸಿ ಅವರ ಬದುಕಿನ ಕತೆ ಕೇಳಿ ಕೊನೆಯವರೆಗೂ ಅದನ್ನೇ ನೆನಪಿಟ್ಟುಕೊಳ್ಳೋ ಅದ್ಭುತ ಮನುಷ್ಯ. "ಮೊನ್ನೆ ಮಗನಿಗೆ ಬಂದ ಜ್ವರ ಹೋಯ್ತಾ?" "ನಿಮ್ಮ‌ಮನೆಗೆ ಬಂದ‌ ನಾಯಿ ಹೇಗಿದೆ"." ಮನೆಗೆ ಹಾವು ಬಂದಿತ್ತಂತೆ", "ಅಮ್ಮ ಮಾಡಿದ ಚಿತ್ರಾನ್ನ ನನಗೂ ಒಮ್ಮೆ ತರೋದಕ್ಕೆ ಹೇಳು".‌"ಮೊನ್ನೆ ಅಡಿಕೆಗೆ ಹೇಗೆ ರೇಟ್ ಸಿಕ್ತು". ಹೀಗೆ ಬದುಕಿನ ಕತೆ ಅವರ ಮುಂದೆ ಓಡಾಡುತ್ತಿದ್ದವು. ಆದರೂ ಅವರಿಗೆ ನೋವಿತ್ತು ಮಗಾ ಜೀವನ‌ ಹೇಗೆ ಮಾಡ್ತಾನೆ ಅಂತ?. ಕೊರೋನ ಬದುಕಿನ ಅನ್ನದ ತಟ್ಟೆಯನ್ನ ದೂರ ತಳ್ಳಿತ್ತು. ಮನೇಲಿ ಹಸಿವು ಒಂದಷ್ಟು ಹೆಚ್ಚೇ ಮಾತಾಡಿತ್ತು. ಅಪ್ಪನ ಮೌನ ಅಮ್ಮನ ನಿಟ್ಟುಸಿರು ಮನೆ ಮಗನನ್ನು ಒಮ್ಮೆ‌ ಭಯ ಪಡಿಸಿತು. ಅಪ್ಪನ‌ ಕೆಲಸ‌ ನೋಡಿ ಅರಿತಿದ್ದ ಮಗ ಗಟ್ಟಿ‌ಮನಸ್ಸು ಮಾಡಿ ಸಣ್ಣ ಅಂಗಡಿ ಆರಂಭಿಸಿದ. ಆಮ್ಲೇಟ್, ಮೊಟ್ಟೆ ಜೊತೆ ಕಬಾಬ್, ಫ್ರೈಡ್ ರೈಸ್ ಕೈ ಹಿಡಿಯಿತು. ಮನೆಯ ಹಸಿವು ನೀಗಿತು. ಚಿಂತೆ ಕಳೆದು ನಗು ಮೂಡಿತು.‌ ಮಗನ‌ ಜೊತೆ ಓದಿದವರ ತಿಂಗಳ ಸಂಬಳ ಇವನಿಗೆ ವಾರಕ್ಕೆ ಜಮೆಯಾಗುತ್ತಿತ್ತು. ಹಸಿವಿನಿಂದ ಆರಂಭವಾದದ್ದು ಆಸಕ್ತಿಯಾಗಿ ಬದಲಾಯಿತು. ಹಸಿವು ಬದುಕಲು ಪ್ರೇರೇಪಿಸುತ್ತದೆ. ಹಸಿವಿನಿಂದ ಆರಂಭವಾದ ಕೆಲಸ ಒಂದು ಬದುಕಿನ ಹಸಿವನ್ನು‌ ಮತ್ತಷ್ಟು ಹೆಚ್ಚಿಸಿದೆ. ಹಸಿವು ಅದೊಂದು ಅದ್ಭುತ ಅಲ್ಲವೇ...?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ