ಸ್ಟೇಟಸ್ ಕತೆಗಳು (ಭಾಗ ೩೯೧) - ನಾಳೆ
ಇಂದು ಬೆಳಗ್ಗೆ ಎಂದಿನಂತಿರಲಿಲ್ಲ. ಎದ್ದ ಕೂಡಲೇ ಮನಸ್ಸಿನೊಳಗೆ ಒಂದು ಸಣ್ಣ ಮಾತು ಮತ್ತೆ ಮತ್ತೆ ಕೇಳಿಸ್ತಾ ಇತ್ತು. ಇಂದು ನಿನ್ನ ಕೊನೆಯ ದಿನ. ನಾಳೆಯಿಂದ ನಿಮ್ಮೂರಿನ ಸ್ಮಶಾನದಲ್ಲಿ ನಿನ್ನ ವಾಸ. ನಿನ್ನ ನೆನಪುಗಳು ಮಾತ್ರ ಈ ಊರಲ್ಲಿ ಬದುಕಿರುವವರಿಗೆ ಉಳಿದುಬಿಡುತ್ತದೆ. ದೇಹ ಸಣ್ಣದಾಗಿ ನಡುಗಿತು.
ಭಯವನ್ನು ಹೊರಗಿಂದ ನೋಡೋದಕ್ಕೆ ಏನೋ ಬೆವರು ನಿಧಾನವಾಗಿ ಹೊರ ಬರಲಾರಂಭಿಸಿತು. ಒಂದು ಕ್ಷಣ ನಿಂತು ಸಾಯೋ ಮುಂಚೆ ಮಾಡಬೇಕಾದ ಕೆಲಸಗಳೇನು ಅಂತ ಪಟ್ಟಿ ಮಾಡುವುದಕ್ಕೆ ಆರಂಭ ಮಾಡಿದೆ. ಅದು ಮುಗಿಯುವ ಲಕ್ಷಣವೇ ಇಲ್ಲ. ಯಾರಲ್ಲಿ ಮಾತನಾಡಲಿ, ಯಾರಿಗೆ ಸಹಾಯ ಮಾಡಲಿ, ಯಾವ ಕೆಲಸವನ್ನು ಮುಗಿಸಲಿ, ಯಾರಿಗೆ ಕೊಟ್ಟ ಮಾತನ್ನು ಮೊದಲು ಪರಿಹಾರ ಮಾಡಿಕೊಳ್ಳಲಿ, ಒಳಗಿರುವ ಯಾವ ಆಸೆಯನ್ನು ಮೊದಲು ತೀರಿಸಿಕೊಳ್ಳಲಿ ಹೀಗೆ ಪಟ್ಟಿಗಳು ಬೆಳೆಯುತ್ತಾ ಹೋದವು.
ಕೊನೆಯ ಕ್ಷಣದಲ್ಲಿ ಯಾವ ಕೆಲಸವನ್ನು ಮಾಡಿದರೂ ಎಲ್ಲವೂ ಅರ್ಧಂಬರ್ಧಕ್ಕೆ ನಿಂತು ಹೋದವು. ಸಂಜೆ ಸೂರ್ಯ ಮುಳುಗುತ್ತಿದ್ದ ಹಾಗೆ ಜೀವನ ಆದಷ್ಟು ಬೇಗ ಮುಗಿದುಬಿಡಲಿ ಅನ್ನುವ ಯೋಚನೆ ಒಂದು ಕಡೆ. ಬೇಡಪ್ಪ ಇನ್ನೊಂದು ಸ್ವಲ್ಪ ದಿನ ಬದುಕೋ ಅವಕಾಶ ಕೊಡು ಬಾಕಿ ಇರುವ ಕೆಲಸಗಳನ್ನು ಮುಗಿಸಿಬಿಡುತ್ತೇನೆ. ಅನ್ನೋದು ಇನ್ನೊಂದು ಕಡೆ. ಇಲ್ಲ ಸಂಜೆ ಸೂರ್ಯ ಇಳಿತ ಇದ್ದ ಹಾಗೆ ದೇಹದಲ್ಲಿ ಉಸಿರು ಕೂಡ ಕಡಿಮೆಯಾಗತೊಡಗಿತು. ಆ ಕ್ಷಣ ಮನಸ್ಸು ಯೋಚಿಸುತ್ತಿದ್ದದ್ದು ಒಂದೇ. ಬಾಕಿ ಉಳಿಸಿದ ಕೆಲಸಗಳನ್ನು ಅಂದಂದೇ ಮುಗಿಸಿದ್ದರೆ ನೆಮ್ಮದಿಯ ಸಾವು ಸಿಗುತ್ತಿತ್ತು. ಈಗ ಮುಗಿಸುತ್ತೇನೆ ಅಂತಂದ್ರು ನನ್ನ ಬಳಿ ಸಮಯವಿಲ್ಲ. ಕಷ್ಟಪಟ್ಟು ಉಸಿರಾಡುತ್ತಿದ್ದೇನೆ. ಸಮಯವನ್ನ ಹಾಳು ಮಾಡಿಕೊಳ್ಳಬಾರದು, ತಕ್ಷಣ ತಕ್ಷಣವೇ ಕೆಲಸಗಳನ್ನ ಮುಗಿಸಿಬಿಡಬೇಕು. ನಾಳೆಯ ಬಗ್ಗೆ ಗೊತ್ತಿರುವುದಿಲ್ಲ ಅಲ್ವಾ? ಉಸಿರು ನಿಂತು ಹೋಯಿತು ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ