ಸ್ಟೇಟಸ್ ಕತೆಗಳು (ಭಾಗ ೩೯೨) - ಅವನ ಬದುಕು

ಸ್ಟೇಟಸ್ ಕತೆಗಳು (ಭಾಗ ೩೯೨) - ಅವನ ಬದುಕು

"ಉತ್ತರ ಬರೆದವನ ಮನಸ್ಥಿತಿ ಹೇಗಿರುತ್ತದೆ" ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿದ್ದೆ. ಅಲ್ಲಿ ಎಲ್ಲರಿಗೂ ಇದ್ದದ್ದು ಒಂದೇ ಪ್ರಶ್ನೆ ಆದರೆ ಉತ್ತರಿಸಿದ ರೀತಿಗಳು ಬೇರೆ ಬೇರೆ. ಅಂದರೆ ಪ್ರತಿಯೊಬ್ಬರಿಗೂ ಪಾಠ ಅರ್ಥವಾದ ಬಗೆ ಬೇರೆಯೇ ಆಗಿತ್ತು. ಒಬ್ಬೊಬ್ಬರು ಒಂದೊಂದು ರೀತಿಯ ಯೋಚನೆಯನ್ನು ಹೊಂದಿದವರು. ಜೊತೆಗೆ ಉತ್ತರಿಸುವ ದಿನ ಅವರ ಮನಸ್ಸಿನಲ್ಲಿ ಓಡಾಡುತ್ತಿದ್ದ ವಿಚಾರಗಳೇ ಬೇರೆ. ಹಿಂದಿನ ದಿನ ರಾತ್ರಿ ಕೆಲವರ ಮನೆಗಳಲ್ಲಿ ಸಂಭ್ರಮ ಇದ್ದಿರಬಹುದು ,ದುಃಖವು ಇದ್ದಿರಬಹುದು. ನೋವಿದ್ದಿರಬಹುದು, ಹಲವಾರು ಭಯವು ಇದ್ದಿರಬಹುದು. ಭವಿಷ್ಯದ ಆಲೋಚನೆಯಾಗಿದ್ದಿರಬಹುದು. ಈ ಎಲ್ಲಾ ಮನಸ್ಥಿತಿಗಳು ಬರೆದ ಉತ್ತರಗಳಲ್ಲಿ ಬಿಂಬಿತವಾಗುತ್ತಿತ್ತು. ಕೆಲವೊಂದು ಕಡೆ ಆರಂಭ ತುಂಬಾ ಸುಂದರವಾಗಿದ್ದು ಅಂತ್ಯವನ್ನು ಬೇಕೋ ಬೇಡವೋ ಅಂತ ನೀಡುತ್ತಿದ್ದರು .ಆ ಸಮಯದಲ್ಲಿ ಮನಸ್ಸು ಬೇರೆ ಏನೋ ಕೆಲಸ ಮಾಡುತ್ತಿದ್ದಿರಬೇಕು. 

ಇದೆಲ್ಲವೂ ಖಾಲಿ, ಬರೆದ ಉತ್ತರ ಪತ್ರಿಕೆಯನ್ನು ನೋಡಿ ಹೀಗಿದ್ದಿರಬಹುದು ಅನ್ನೋ ಯೋಚನೆ ಅಷ್ಟೇ. ಬರೆದ ಬರವಣಿಗೆಯೇ ಬದುಕಿನ ಯೋಚನೆಯನ್ನು ಇನ್ನೊಬ್ಬರಿಗೆ ತಿಳಿಸುವುದಾದರೆ, ಜೊತೆಗೆ ಬದುಕುವವರಿಗೆ ನಮ್ಮ ಬದುಕಿನ ಹಲವು ವಿಚಾರಗಳು ತಿಳಿದಿರಬಹುದು ಅಲ್ವಾ?. ನಾನು ಹಾಗೆ ಅಂದುಕೊಂಡಿದ್ದೆ ಆದರೆ ಹಾಗೆಲ್ಲ. ಜೊತೆಗೆ ಬದುಕುವವರಿಗೆ ಪಕ್ಕದಲ್ಲಿ ನಡೆಯುವವರ ಬದುಕು ಅರ್ಥವಾಗಿದ್ದರೆ ಹಲವು ಸಮಸ್ಯೆಗಳು ಪರಿಹಾರವಾಗಿ ಹೋಗುತ್ತಿದ್ದವು .

ಎಲ್ಲವೂ ನಾವು ಆಲೋಚಿಸುವ ರೀತಿಯಷ್ಟೇ .ಅವನು ಬದುಕನ್ನು ಅವನೊಬ್ಬನ ಹೊರತು ಇನ್ಯಾರಿಗೂ ಅರ್ಥವಾಗುವ ಸಾಧ್ಯವಿಲ್ಲ. ಹಾಗಾಗಿ ಉತ್ತರಪತ್ರಿಕೆಗಳನ್ನು ತಿದ್ದುವುದು ಅಷ್ಟೇ ನನ್ನ ಕೆಲಸ. ಅವನ ಬದುಕಿನ ಯೋಚನೆಗೆ ಹೋಗಿ ನನ್ನ ಸಮಯವನ್ನ ಹಾಳು ಮಾಡಿಕೊಳ್ಳುವುದು ಒಳ್ಳೆಯದಲ್ಲ ಅಂತ. ಅವರ ಬದುಕು ಅವರದು …

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ