ಸ್ಟೇಟಸ್ ಕತೆಗಳು (ಭಾಗ ೩೯೪) - ಎಲ್ಲರೊಳಗೊಂದಾಗು
ನಾನು ಅಂದುಕೊಂಡಿದ್ದೆ ಸಂಬಂಧ ಅನ್ನೋದು ನಾವು ಹುಟ್ಟಿದ ತಕ್ಷಣ ಹುಟ್ಟಿಕೊಳ್ಳುತ್ತದೆ. ಆದರೆ ಆಮೇಲೆ ಅರಿವಾಗುತ್ತಾ ಹೋಯಿತು, ಸಂಬಂಧ ಅನ್ನೋದು ಹುಟ್ಟಿದ ತಕ್ಷಣ ಕೂಡಿಕೊಳ್ಳುವುದಿಲ್ಲ, ನಾವು ಬೆಳೆಯುತ್ತಾ ಹೋದ ಹಾಗೆ ನಮ್ಮ ಸುತ್ತಮುತ್ತ ನಾವು ಬೆಳೆಸಿಕೊಳ್ಳುವ ಆತ್ಮೀಯತೆಯಿಂದ, ಕಷ್ಟಕ್ಕಾಗುವ ಬಂಧುಗಳಿಂದ ಸಂಬಂಧ ಅನ್ನೋದು ಬೆಳೆಯುತ್ತಾ ಹೋಗುತ್ತದೆ. ಹುಟ್ಟಿದ ತಕ್ಷಣ ಜೊತೆಯಾಗುವುದು ಮಾತಿನ ಸಂಬಂಧಗಳು. ಅದು ಹೆಸರಿಗಷ್ಟೇ ಆದರೆ, ಸಂಬಂಧಗಳ ನಿಜವಾದ ಅರ್ಥಗಳು ತಿಳಿಯೋದು ಜೀವನದ ಕಷ್ಟದ ಸಮಯದಲ್ಲಿ, ಬದುಕಿನ ತಿರುವುಗಳಲ್ಲಿ, ಜೀವನ ಕತ್ತಲೆಯ ಹಾದಿಯಾದರೆ ನಿಜವಾದ ಸಂಬಂಧಗಳು ಬೆಳಕಿಗೆ ಬರುತ್ತವೆ. ಗುರುತಿಲ್ಲದ ಊರಿಗೆ ನಡೆದಾಗ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ಎದುರಾದಾಗ ಹೊಸ ಪರಿಚಯಗಳನ್ನು ಮಾಡಿಕೊಂಡು ಅಲ್ಲೇ ಒಂದು ಕೋಣೆಯಲ್ಲಿ ಜೊತೆಯಾಗಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಒಂದೇ ಮನಸ್ಥಿತಿಯ ಎಲ್ಲ ಮನಸ್ಸುಗಳು ಅಲ್ಲಿ ಬದುಕಬೇಕಾಗುತ್ತದೆ. ಆ ಬದುಕು ದಿನ ಕಳಿಯುತ್ತಾ ಹೋದ ಹಾಗೆ ಸಂಬಂಧವಾಗಿ ಬಿಡುತ್ತದೆ. ನಾನು ಅಂದುಕೊಂಡಿರುವುದು ಇಷ್ಟೇ ನಮ್ಮ ಬದುಕಿನ ಪ್ರತಿ ಕ್ಷಣವೂ ಸಂಬಂಧಗಳನ್ನು ಬೆಸೆಯುವ ಕ್ಷಣಗಳಾಗಬೇಕು. ನಾವೆಲ್ಲರೂ ಸಂಬಂಧಗಳ ಕೊಂಡಿಗಳನ್ನು ಬೆಸೆಯುತ್ತಾ ನಮ್ಮ ಸುತ್ತಲೆಲ್ಲರೂ ನಮ್ಮವರಾಗಿ ಮಾರ್ಪಾಡಾಗಬೇಕು. ನಾವು ಎಲ್ಲರೊಳಗೊಂದಾಗ ಬೇಕು. ಅದಕ್ಕೆ ದೊಡ್ಡವರು ಹೇಳಿದ್ದು ಎಲ್ಲರೊಳಗೊಂದಾಗು ಮಂಕುತಿಮ್ಮ ಅಂತ…!
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ