ಸ್ಟೇಟಸ್ ಕತೆಗಳು (ಭಾಗ ೩೯೫) - ಜವಾಬ್ದಾರಿ

ಸ್ಟೇಟಸ್ ಕತೆಗಳು (ಭಾಗ ೩೯೫) - ಜವಾಬ್ದಾರಿ

ನಾನು ಆಗಾಗ ಕೇಳುತ್ತಿದ್ದ ಮಾತು ಜವಾಬ್ದಾರಿಯಿಂದ ಕೈತೊಳೆದುಕೊಂಡೆ. ಆದರೆ ಕಳೆದುಕೊಂಡ ಮೇಲೆ ಒಂದು ಸಲ ಯೋಚಿಸಬೇಕು, ನಾನು ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದ್ದೇನಾ? ಕೆಲವೊಂದು ಸಲ ಜವಾಬ್ದಾರಿ ನಿರ್ವಹಿಸುವ ತರಾತುರಿಯಲ್ಲಿ ಕೆಲವೊಂದು ಬದುಕುಗಳು ದಾರಿ ತಪ್ಪಿ ಬಿಡುತ್ತವೆ ಅಥವಾ ಅವರ ಆಸೆಗಳು, ಕನಸುಗಳೆಲ್ಲವೂ ಮೂಲೆ ಸೇರಿಬಿಡುತ್ತವೆ. ಪ್ರತಿಯೊಬ್ಬರಿಗೂ ಜವಾಬ್ದಾರಿಗಳಿವೆ.ಅದನ್ನು  ನಿಭಾಯಿಸುವ ಅಗತ್ಯವೂ ಇದೆ. ಆದರೆ ಜವಾಬ್ದಾರಿಗಳನ್ನು ನಿಭಾಯಿಸುವ ಅವಸರಗಳಲ್ಲಿ ಯಾರ ಬದುಕನ್ನು ನಾಶ ಮಾಡುವ ಹಕ್ಕು ನಮಗಿಲ್ಲ. ಜವಾಬ್ದಾರಿಗಳ ಮೂಟೆಗಳನ್ನು ಹೊತ್ತಿರುವಾಗ ಕೆಲವೊಂದು ಸಲ ತಪ್ಪುಗಳು ನಡೆದು ಹೋಗುತ್ತವೆ. ತಪ್ಪುಗಳ ಪ್ರಾಯಶ್ಚಿತ್ತವನ್ನು ಪಡುವವರು ಜವಾಬ್ದಾರಿಯನ್ನು ನಿಭಾಯಿಸಿದವರಲ್ಲ, ಜವಾಬ್ದಾರಿ ನಿಭಾಯಿಸಿದವರ  ನಡುವೆ ಸಿಲುಕಿ ಹಾಕಿಕೊಂಡವರು. ಮನೆಯವರ ಜವಾಬ್ದಾರಿಯ ನಡುವೆ ಮಗಳ ಬದುಕು ಬೀದಿಗೆ ಬೀಳಬಾರದು, ಮಗನ ಜವಾಬ್ದಾರಿಯ ಒತ್ತಡಗಳಲ್ಲಿ ತಂದೆ-ತಾಯಿ ಕಣ್ಣೀರಿಡುವಂತಾಗಬಾರದು. ಕೆಲಸ ನಿರ್ವಹಿಸುವ ಸಂಸ್ಥೆಯ ಜವಾಬ್ದಾರಿ ನಿರ್ವಹಿಸುವಾಗ ಹೆಸರು ಹಾಳಾಗಬಾರದು. ಹೀಗೆ, ಪಟ್ಟಿಗಳು ತುಂಬಾ ದೊಡ್ಡದು. ಜವಾಬ್ದಾರಿಯನ್ನು ತೆಗೆದುಕೊಂಡ ಮೇಲೆ ಪ್ರತಿಯೊಬ್ಬರ ನಗುವೂ ಕೂಡ ಮುಖ್ಯವಾಗುತ್ತದೆ. ಯಾಕೆಂದರೆ ಪ್ರತಿಯೊಬ್ಬರಿಗೂ ಅವರದೇ ಆದ ಬದುಕಿರುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ