ಸ್ಟೇಟಸ್ ಕತೆಗಳು (ಭಾಗ ೩೯೬) - ನ್ಯಾಯ

ಸ್ಟೇಟಸ್ ಕತೆಗಳು (ಭಾಗ ೩೯೬) - ನ್ಯಾಯ

ಮನೆಯಲ್ಲಿ ಆಗಾಗ ಯಾವುದೋ ವಿಚಾರಕ್ಕೆ ನನಗೂ ಅಪ್ಪನಿಗೂ ಮಾತುಕತೆ ನಡೆಯುತ್ತಾ ಇರುತ್ತೆ ."ನ್ಯಾಯ ಅನ್ನುವ ಮಾತು ಹೆಚ್ಚಾಗಿ ಕೇಳುವುದು ಕೋರ್ಟಿನಲ್ಲಿ ತಪ್ಪಿದ್ರೆ, ಮಾಡುವ ಕೆಲಸಕ್ಕೆ ನ್ಯಾಯ ಒದಗಿಸಬೇಕು ಅನ್ನುವ ವಿಚಾರದಲ್ಲಿ.ಈ  ಎರಡನ್ನು ಬಿಟ್ಟರೆ ಬೇರೆಲ್ಲೂ ನನಗೆ ನ್ಯಾಯ ಅನ್ನೋದು ಹೊಂದಿಕೊಳ್ಳುವುದಿಲ್ಲ ಅಂತ ಕಾಣಿಸುತ್ತೆ" 

"ಹಾಗೇನೂ ಇಲ್ಲ. ನಮ್ಮ  ನಮ್ಮ ಜೀವನದ ಪ್ರತಿಯೊಂದು ಕ್ಷಣದಲ್ಲೂ ನ್ಯಾಯ ಬದುಕ್ತಾ ಇರುತ್ತೆ. ಈ  ಭೂಮಿಯಲ್ಲಿ ನಾವು ಹುಟ್ಟಿದ್ದೇವೆ ಅಂದಮೇಲೆ ಬದುಕಿಗೊಂದು ನ್ಯಾಯ ಕೊಡಬೇಕು, ನಮ್ಮ ತಂದೆ ತಾಯಿಗಳು ನಮ್ಮನ್ನು ಓದಿಸಿದ್ದಾರೆ ಆ  ಓದುವಿಕೆಯ ಒಂದು ನ್ಯಾಯ ಕೊಡಬೇಕು, ನಾವು ತಟ್ಟೆಯಲ್ಲಿ ಹಾಕಿದ ಅನ್ನವನ್ನು ತಿನ್ನುತ್ತಿರುವಾಗ ಬೆಳೆದ ರೈತ ಹರಿಸಿದ ಬೆವರಿಗೆ ನಾವು ನ್ಯಾಯ ಕೊಡಬೇಕು, ತಿಂಗಳಾಂತ್ಯಕ್ಕೆ ಒಂದಷ್ಟು ಸಂಬಳ ನಮಗೆ ಸಿಗುತ್ತಿದ್ದರೆ ಪಡೆಯುವ ಸಂಬಳಕ್ಕೆ ನ್ಯಾಯ ಕೊಡಬೇಕು, ನಾವು ಒಬ್ಬರನ್ನು ತುಂಬಾ ಇಷ್ಟಪಟ್ಟಿದ್ದೇನೆ ಅಂತಾದರೆ ಆ ಪ್ರೀತಿಗೆ ಒಂದು ನ್ಯಾಯ ಕೊಡಬೇಕು, ದೇವರು ನಮ್ಮ ಬದುಕಿಗೆ ಆಗಾಗ ಮಳೆ ಸುರಿಸುತ್ತಾ ಬದುಕಿಗೆ ಆಧಾರವನ್ನು ಕೊಟ್ಟಿದ್ದಾನೆ ಅದಕ್ಕೊಂದು ನ್ಯಾಯ ಕೊಡಿಸಬೇಕು, ಉಸಿರ ಆರಂಭದಿಂದ ಉಸಿರು ನಿಲ್ಲುವವರೆಗೆ ಪ್ರತಿಯೊಂದು ಕ್ಷಣದಲ್ಲೂ ಪ್ರತಿಯೊಂದು ವಿಚಾರದಲ್ಲೂ ನಾವು ನ್ಯಾಯವನ್ನ ಕೊಡುತ್ತಲೇ ಹೋಗಬೇಕು. ಹಾಗಾಗಿ ನ್ಯಾಯ ಅನ್ನೋದು ನಮ್ಮ ಬದುಕಿನ ಒಂದು ಭಾಗ. ಹಾಗಾಗಿ ಅದರ ಜೊತೆಗೆ ಬದುಕಬೇಕು. ನ್ಯಾಯಕ್ಕೂ ನಮ್ಮ ಜೊತೆಗೆ ಬದುಕುವ ಆಸೆ ಇದೆ ಆದರೆ ನಾವು ಹತ್ತಿರ ಸೇರಿಸುತ್ತಿಲ್ಲ.

ಈಗ ನಿನಗೆ ಬರವಣಿಗೆಗೊಂದು ನ್ಯಾಯ ಕೊಡಬೇಕು ಅನ್ನಿಸ್ತು ಅದಕ್ಕಾಗಿ ಬರಿತಾ ಇರ್ತೀಯಲ್ಲಾ ಹಾಗೆ…!

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ