ಸ್ಟೇಟಸ್ ಕತೆಗಳು (ಭಾಗ ೩೯೮) - ಕಾಯುತ್ತಿದ್ದಾರೆ
"ನಮಗೆ ನಾವು ಚಲಾಯಿಸುತ್ತಿರುವ ವಾಹನದ ಮೇಲೆ ಹಿಡಿತವಿಲ್ಲದಿದ್ದರೆ ವಿಪರೀತ ವೇಗದಲ್ಲಿ ಸಾಗಬಾರದು. ಕಾಲ ಯಾವುದೇ ಇರಲಿ ಸದ್ಯಕ್ಕಂತೂ ಮಳೆಗಾಲ. ರಸ್ತೆಯಲ್ಲಿರುವ ಹೊಂಡ ಯಾವುದು ಏರು ತಗ್ಗುಗಳು ಯಾವುದು ಅನ್ನೋದು ಮಳೆನೀರಿನಿಂದ ಗೊತ್ತಾಗೋದಿಲ್ಲ. ನಮ್ಮ ಅಪರಿಮಿತ ವೇಗಕ್ಕೆ ಯಾವುದೋ ಮುಗ್ಧ ಜೀವ ಬಲಿ ಆಗುವುದು ಅಥವಾ ನಮ್ಮ ಹಿಡಿತಕ್ಕೆ ಸಿಗದೆ ನಮ್ಮದೇ ಜೀವ ಹೋಗೋದು ಯಾಕೆ ?."ಹೀಗೆಂದು ಮಾತನಾಡಿ ಅವರು ಮುಂದುವರೆದು ಬಿಟ್ಟರು. ಆದರೆ ಅದರಲ್ಲಿ ಜೀವನ ಪಾಠ ಮಾಡಿದ್ದಾರೆ ಅನ್ನೋದು ನನ್ನ ಅರಿವಿಗೇ ಬರಲಿಲ್ಲ. ಹೌದಲ್ವಾ ನಮ್ಮ ಜೀವನವನ್ನು ಸಾಗಿಸುವಾಗ ಪ್ರತಿಯೊಂದು ನಮ್ಮ ಹಿಡಿತದಲ್ಲಿರಬೇಕು. ನಮ್ಮ ಹಿಡಿತ ತಪ್ಪಿ ಮನಸೋ ಇಚ್ಛೆ ಬಂದಂತೆ ನಮ್ಮ ಗುರಿಯ ಕಡೆಗೆ ಸಾಗಿದರೆ ಅವಗಡಗಳು ಖಂಡಿತ ಸಂಭವಿಸುತ್ತವೆ. ನಾವು ಅಷ್ಟರವರೆಗೆ ಪಟ್ಟ ಶ್ರಮ, ನಮ್ಮವರ ಬಯಕೆ ಹಾರೈಕೆ ಕನಸುಗಳೆಲ್ಲವೂ ನುಚ್ಚುನೂರಾಗುತ್ತದೆ. ನಮ್ಮ ಹಿಡಿತವಿಲ್ಲದ ಗುರಿಯೆಡೆಗಿನ ಪಯಣ ಇನ್ಯಾರದೋ ನೋವಿಗೆ, ಸೋಲಿಗೆ ಕಾರಣವಾಗಬಾರದು. ನಾವು ಗುರಿಯ ಕಡೆಗೆ ಸಾಗುವಾಗ ಎಲ್ಲರ ಬದುಕು ನಮ್ಮ ಕಣ್ಣ ಮುಂದಿರಬೇಕು ,ಯಾಕೆಂದರೆ ಪ್ರತಿಯೊಬ್ಬರ ಗೆಲುವನ್ನ ಯಾರೋ ಒಬ್ಬರು ತುಂಬಾ ಆಸೆಯಿಂದ ಕಾಯುತ್ತಿರುತ್ತಾರೆ. ಅದು ಮಣ್ಣಾಗಬಾರದು. ನಾವು ಮನೆ ತಲುಪುವವರೆಗೂ ಅಮ್ಮನೂ ಕಾಯ್ತಾ ಇರ್ತಾರೆ ಅಲ್ವಾ ಹಾಗೆ...!
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ