ಸ್ಟೇಟಸ್ ಕತೆಗಳು (ಭಾಗ ೩೯) - ಮರ
ಹೀಗೆ ನಡೆದುಹೋಗುತ್ತಿದ್ದವನ ತಡೆದು ನಿಲ್ಲಿಸಿತು ಆ ಮರ. ಸುತ್ತಲೂ ಯಾರಿಲ್ಲ ಅನ್ನೋದನ್ನ ಖಾತ್ರಿಪಡಿಸಿ ನನ್ನನ್ನ ನಿಲ್ಲಿಸಿರಬೇಕು. ನನ್ನನ್ನೇ ಯಾಕೆ ನಿಲ್ಲಿಸಿದ್ದು ಅನ್ನೋದು ದೇವರಾಣೆ ನಂಗೆ ಗೊತ್ತಿಲ್ಲ. "ನಿನಗೆ ಯಾವತ್ತೂ ನೋವಾಗುವುದಿಲ್ಲವಾ? ನೀನು ದಿನವೂ ಸಾಗುತ್ತಿರುವ ದಾರಿಯಲ್ಲಿ ನೋಡುತ್ತಿರುವ ಮರ ಹಠಾತ್ತನೆ ಮಾಯವಾದರೆ, ಯಾವುದೋ ರಸ್ತೆ ಅಗಲಕ್ಕೆ ಬೇರು ಸಮೇತ ಬೋಳಿಸಿದರೆ, ಮನೆ ಕಟ್ಟೋಕೆ ಕತ್ತರಿಸಿದರೆ, ವಿದ್ಯುತ್ ತಂತಿಗೆ ತಗುಲುತ್ತಿದೆ ಅನ್ನೋದಕ್ಕೆ ನನ್ನನ್ನೇ ಮಾಯ ಮಾಡಿದರೆ ನಿನಗೆ ಏನು ಅನಿಸುವುದಿಲ್ಲವೇ? ನನ್ನ ಅಂಗಾಂಗಗಳನ್ನ ಕತ್ತರಿಸಿ ಅದೇನು ಖುಷಿಪಡುತ್ತೀಯಾ ನೀನು. ನೆಲ ಕೊರೆದದ್ದಕ್ಕೆ ನಿಲ್ಲೋಕೆ ಆಗದೆ ನನ್ನಂಥವರು ಹಲವರು ಉರುಳಿದರು. ನಮಗೆ ರಕ್ಷಣೆ ನೀಡೋಕೆ ಯಾವ ಕಾನೂನು ಇಲ್ವಲ್ಲಾ? ನಿಮ್ಮದೇ ಅಧಿಕಾರ, ನನ್ನಿಷ್ಟ ಅನ್ನೋ ಮಾತು ಬೇರೆ. ನಾನು ಕೆಸರಲ್ಲಿ ಇದ್ರೂ ಹೂವರಳಿಸುತ್ತೇನೆ. ಕಲ್ಮಶ ತಿಂದು ಹಣ್ಣು ನೀಡುತ್ತೇನೆ. ನೆಲ ಒಣಗಿದ್ದರೂ ಚಿಗುರೆಲೆಗಳನ್ನ ಧರಿಸಿ ನಿನಗೆ ತಂಪೆರೆಯುತ್ತೇನೆ. ಬಿಸಿಲಿಗೆ ನನ್ನನ್ನು ಒಡ್ಡಿ ನೆರಳಾಗುತ್ತೇನೆ. ಚಳಿಯಲ್ಲಿ ಗಟ್ಟಿ ನಿಂತಿದ್ದೇನೆ. ದೊಡ್ಡ ಗಾಳಿಗೆ ನನ್ನ ಎಲೆಗಳನ್ನು ಜತನವಾಗಿ ಕಾಪಾಡಿದ್ದೇನೆ. ನೀನು ಸತ್ತಮೇಲೆ ನಾರುತ್ತೀಯಾ ಆದರೆ ನಾನು ಸುಗಂಧವಾಗಿರುತ್ತೇನೆ. ನಿನಗೆ ಕಿವಿಗಳೇ ಇಲ್ಲಾ ಅನಿಸ್ತಿದೆ. ನೀನು ನೋವು ಕೊಟ್ಟರು ಒಳಿತೇ ಮಾಡುತ್ತೇನೆ, ಇಷ್ಟೆಲ್ಲ ಇದ್ದರೂ ನೀನು ಬದಲಾಗುವುದು ಯಾವಾಗ? ನನ್ನ ಉಳಿವಿನ ಯೋಚನೆ ಹುಟ್ಟೋದು ಯಾವಾಗ? ನನ್ನ ಬೆಳೆಸಿದರೆ ಮಾತ್ರ ಅಭಿವೃದ್ಧಿ ಅನ್ನೋದು ತಿಳಿಯೋದು ಯಾವಾಗ? ಹಸಿರುಳಿಸೋಣ ಅನ್ನೋದು ಬರಿಯ ಫೋಟೋಗೆ ಮಾತ್ರಾನಾ? ನಿನ್ನ ಬಳಿಯೇ ಮಾತಾಡ್ತಾ ಇರೋದು, ಏನಾದ್ರೂ ಹೇಳಯ್ಯಾ".. ನನ್ನಲ್ಲಿ ಉತ್ತರವಿರಲಿಲ್ಲ. ಮೌನದಿ ಕುಗ್ಗಿದ್ದೇನೆ, ಇನ್ನೇನು ಹೇಳಲಿ .....
-ಧೀರಜ್ ಬೆಳ್ಳಾರೆ
ಇಂಟರ್ನೆಟ್ ಚಿತ್ರ ಕೃಪೆ