ಸ್ಟೇಟಸ್ ಕತೆಗಳು (ಭಾಗ ೪೦೦) - ಮಧ್ಯಮ ವರ್ಗ
ಬದುಕು ಬೇಡ ಅನ್ನಿಸುತ್ತದಂತೆ ಕೆಲವರಿಗೆ. ಅವರಿಗೆ ಹಾಗೆ ಅನ್ನಿಸೋಕೆ ಒಂದಷ್ಟು ಕಾರಣಗಳು ಕೂಡ ಇವೆ. ಸಮಸ್ಯೆಗಳು ಆರಂಭವಾಗುತ್ತವೆ ..ಒಂದು ಸಮಸ್ಯೆಯನ್ನು ಪರಿಹಾರಗೊಳಿಸಿ ಇನ್ನೇನು ಉಸಿರು ಬಿಡಬೇಕು ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ವಕ್ಕರಿಸಿಕೊಂಡು ಬಿಡುತ್ತೆ. ಕೆಲವೊಂದು ಸಮಸ್ಯೆಗಳು ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪರಿಹಾರ ಹುಡುಕಿದರೂ ಒಂದಷ್ಟು ಸಮಸ್ಯೆಗಳು ಹಾಗೆ ಉಳಿದುಬಿಡುತ್ತವೆ. ತೆಗೆದುಕೊಳ್ಳುವ ಒಂದು ನಿರ್ಧಾರದಿಂದ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತೆ ಅನ್ನೋದು ದೃಢವಾಗಿದ್ದರೂ ನಿರ್ಧಾರವನ್ನ ತೆಗೆದುಕೊಳ್ಳಲು ತುಂಬಾ ಹಿಂಜರಿಕೆ. ಯಾಕೆಂದರೆ ಆ ನಿರ್ಧಾರವನ್ನು ತೆಗೆದುಕೊಂಡರೆ ಬದುಕು ಯಾವ ಹಂತಕ್ಕಾದರೂ ಹೋಗಬಹುದು. ಈಗಿರುವ ಸದ್ಯದ ಸ್ವಲ್ಪ ನೆಮ್ಮದಿಯೂ ಮಾಯವಾಗಿ ಬಿಡಬಹುದು. ಬದುಕು ಬೀದಿಗೆ ಬೀಳಬಹುದು. ಸಮಸ್ಯೆ ಪರಿಹಾರವಾಗಲೂಬಹುದು. ನಿರ್ಧಾರವನ್ನ ತೆಗೆದುಕೊಳ್ಳಲು ಭಯ ಯಾಕೆಂದರೆ ಈಗ ನಮ್ಮನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬವಿದೆ .
ಅವರು ಹಸಿವಿನಿಂದ ಕೊರಗುವಂತಾದರೆ. ಇದು ಮಧ್ಯಮ ವರ್ಗದ ಎಲ್ಲ ಮನಸ್ಸುಗಳ ಸಮಸ್ಯೆಗಳು. ತಮಗೋಸ್ಕರ ಬದುಕುವುದಕ್ಕಿಂತ ನಮ್ಮವರಿಗೋಸ್ಕರ ಬದುಕುವುದೇ ಹೆಚ್ಚು. ಹೀಗಿರುವಾಗ ಸಮಸ್ಯೆಗಳು ಸಾಮಾನ್ಯ. ನಿದ್ದೆಯಿಲ್ಲದ, ಊಟವಿಲ್ಲದ, ಕಣ್ಣೀರಿಲ್ಲದ ದಿನಗಳು ಸಿಗುವುದೇ ಬಹಳ. ಹಾಗಿದ್ದರೂ ಮನೆಗಳಿಗೆ ವಿಚಾರ ತಲುಪುವುದೇ ಇಲ್ಲ. ಯಾಕೆಂದರೆ ಅವರ ನೆಮ್ಮದಿ ಹಾಳು ಮಾಡಬಾರದು .ಬದುಕು ಬೇಡ ಅನಿಸಿದ್ದರೂ ತಮ್ಮನ್ನು ನಂಬಿದವರೆಗೋಸ್ಕರ ಮತ್ತೆ ಬದುಕುವ ಛಲ ಈ ಮನಸ್ಸುಗಳದ್ದು. ಹಾಗಾಗಿ ಮಧ್ಯಮವರ್ಗ ಅನ್ನೋದು ಅದೊಂದು ಅದ್ಭುತ ಪ್ರಪಂಚ. ಪ್ರತಿಯೊಂದನ್ನು ಅನುಭವಿಸಿಯೂ ಅದರೊಳಗೆ ಬದುಕೋದೆ ಅದ್ಭುತ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ