ಸ್ಟೇಟಸ್ ಕತೆಗಳು (ಭಾಗ ೪೦೩) - ಅಮ್ಮ
ಆ ಕೈಗಳು ಬದುಕನ್ನ ರೂಪಿಸಿದ್ದಾವೆ. ಎತ್ತಿ ಆಡಿಸಿದ್ದಾವೆ, ತುತ್ತು ತಿನ್ನಿಸಿದ್ದಾವೆ. ಕಣ್ಣೀರು ಒರೆಸಿದ್ದಾವೆ, ದೂರ ಹೋಗುವಾಗ ಕೈಹಿಡಿದು ನಡೆಸಿದ್ದಾವೆ, ತಪ್ಪು ಮಾಡಿದಾಗ ಕಿವಿ ಹಿಂಡಿ ಬೆನ್ನಿಗೆ ಎರಡು ಕೊಟ್ಟಿದ್ದಾವೆ ಕೂಡಾ. ಕಿಟಕಿ ಮೇಲೆ ಹತ್ತಿದಾಗ ಕೆಳಗಿಳಿಯೋಕೆ ಸಹಾಯ ಮಾಡಿದ್ದಾವೆ, ಸಣ್ಣ ಕೆಲಸ ಮಾಡುವಾಗ ವಸ್ತುಗಳನ್ನ ತಂದುಕೊಟ್ಟು ಸಹಾಯ ಮಾಡಿದ್ದಾವೆ, ನನ್ನ ಕೂದಲು ಬಾಚಿ ಹಲ್ಲು ತೊಳಿಸಿದ್ದಾವೆ. ಶಾಲೆಗೆ ಹೊರಡುವಾಗ ಬುತ್ತಿ ಕಟ್ಟಿ ಹಾಕಿದ್ದಾವೆ, ಉಯ್ಯಾಲೆ ಆಡೋಕೆ ಹಗ್ಗ ಕಟ್ಟಿಕೊಟ್ಟಿದ್ದಾವೆ, ಜೋರು ನಿದ್ದೆ ಬರುವಾಗ ಜೋಗುಳ ಹಾಡುತ್ತಾ ಎದೆ ಮೇಲೆ ಸಣ್ಣ ಬಡಿತವನ್ನು ಬರೆದಿದ್ದಾವೆ. ಕೆಲಸಕ್ಕೆ ಹೊರಡುವಾಗ ಆಶೀರ್ವಾದ ಮಾಡಿದ್ದಾವೆ, ಇದೆಲ್ಲವನ್ನು ಮಾಡಿದ್ದು ಎರಡು ಕೈಗಳು. ನನಗೆ ಅಮ್ಮ ಎಂದಾಗ ಮುಖಕ್ಕಿಂತ ಮೊದಲು ನೆನಪಿಗೆ ತರುತ್ತದೆ ಅಮ್ಮನ ಕೈಗಳು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ