ಸ್ಟೇಟಸ್ ಕತೆಗಳು (ಭಾಗ ೪೦೪) - ಪಯಣ

ಸ್ಟೇಟಸ್ ಕತೆಗಳು (ಭಾಗ ೪೦೪) - ಪಯಣ

ಬದುಕಿನ ಆಯಾಮಗಳು ಆಗಾಗ ಬದಲಾಗುತ್ತಿರುತ್ತದೆ. ಹೀಗೇ ಆಗಬೇಕು ಅಂತ ನಿರ್ಧಾರ ಮಾಡುವುದಕ್ಕಾಗುವುದಿಲ್ಲ. ಜೀವನ ಪಯಣದಲ್ಲಿ ಜೊತೆಯಾದರು ಸಾವಿರ ಮಂದಿ, ಪ್ರತಿಯೊಬ್ಬರ ಮಾತುಗಳು ಒಂದೋ ಕುತೂಹಲವನ್ನು, ಸಮಾಧಾನವನ್ನು, ಸಂಶಯವನ್ನು, ನಗುವನ್ನು, ಸಂತಸವನ್ನು ಹೀಗೆ ಬೇರೆ ಬೇರೆ ಭಾವವನ್ನು  ಸೃಷ್ಟಿಸುತ್ತಾ ಇರುತ್ತದೆ .

ಇವತ್ತು ರೈಲಿನ ಪಯಣ ಅದೇಕೋ ಖಾಲಿ ಬೋಗಿಗಳ ನಡುವೆ ಒಂಟಿ ಪಯಣ ಬಿಕೋ ಅನ್ನುತ್ತಿದೆ. ಆಗ ನಮ್ಮ ಬೋಗಿಗೆ ಆಗಮಿಸಿದ ಮಂಗಳಮುಖಿ ನನ್ನ ನೋಡಿ "ನಿನ್ನ ಸುತ್ತಮುತ್ತ ಇರುವವರಿಂದ ನಿನಗೆ ಒಂದಷ್ಟು ತೊಂದರೆಗಳಿವೆ, ಆದರೂ ಒಳ್ಳೆಯದಾಗುತ್ತೆ. ಆದರೆ ನಿನ್ನ ಕೆಳಗಿಳಿಸೋಕೆ ಕಾದು ಕೂತಿರುವವರು ಹೊರಗಿನವರಲ್ಲ" ಅಂತಂದು ನಡೆದೇಬಿಟ್ಟರು. ಪಯಣ ಮುಗಿಸಿ ಮತ್ತೆ ಹಿಂತಿರುಗಿ ಇಷ್ಟು ಸಮಯ ಆದರೂ ಅದೇ ಮಾತುಗಳು ಮನಸ್ಸೊಳಗೆ ಓಡಾಡುತ್ತಲೇ ಇದೆ. ನನಗೆ ತೊಂದರೆ ಕೊಡುವವರು ಯಾರು ಅನ್ನೋ ಪ್ರಶ್ನೆಯನ್ನ ಮತ್ತೆಮತ್ತೆ ಕೇಳುತ್ತಿದ್ದೇನೆ. ಇಡೀ ದಿನದ ಎಲ್ಲ ಭಾವಗಳು ಮೂಲೆಗೆ ಸರಿದು ಬಿಟ್ಟಿವೆ. ಆಗ ಎದುರಿಗೆ ಸಿಕ್ಕ ಗೆಳೆಯ "ಈ ಕ್ಷಣದಲ್ಲಿ ಬದುಕುವುದರ ಹೊರತು, ಭವಿಷ್ಯವನ್ನು ಅರಿಯಲು ಸಾಧ್ಯವಿಲ್ಲ. ಎದುರಿಸಿ ಬಾಳಬೇಕು ಅಷ್ಟೇ" ಅಂತಂದು ನಡೆದುಬಿಟ್ಟ. ಈಗ ಮನಸ್ಸಿಗೊಂದು ನೆಮ್ಮದಿ. ಮಾತುಗಳು ತುಂಬ ಮನಸ್ಸಿಗೆ ನಾಟುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ