ಸ್ಟೇಟಸ್ ಕತೆಗಳು (ಭಾಗ ೪೦೫) - ಭಿಕ್ಷೆ

ಸ್ಟೇಟಸ್ ಕತೆಗಳು (ಭಾಗ ೪೦೫) - ಭಿಕ್ಷೆ

"ಅಣ್ಣ ಒಂದು ಹತ್ತು ರೂಪಾಯಿ ಕೊಡಿ" ಕೈಯನ್ನು ಮುಂದೆ ಚಾಚಿ ಬೇಡುತ್ತಿದ್ದಾರೆ. ಎಲ್ಲರೂ ಅವರ ಮುಖವನ್ನು ನೋಡಿ ಮುಂದುವರಿದರೆ ಹೊರತು ಒಬ್ಬರು ಒಂದು ರೂಪಾಯಿ ನೀಡಲಿಲ್ಲ. ಒಂದಿಬ್ಬರು "ಅಜ್ಜ ನಾನು ಟೀ ಕೊಡುತ್ತೇನೆ, ತಿನ್ನೋಕೆ ಏನಾದರೂ ಬೇಕಾದರೆ ಕೊಡುತ್ತೇನೆ "ಅಂತ ಅಂದ್ರು .

"ಬೇಡಪ್ಪ ನನಗೆ ತಿನ್ನೋಕೆ ಏನು ಬೇಡ, ಹತ್ರುಪಾಯಿ ಆದ್ರೂ ಕೊಡಿ"  ತುಂಬಾ ಜನರು ಆ ಮಾತಲ್ಲಿ ಇರುವ ನೈಜತೆಯನ್ನು ಗಮನಿಸಲಿಲ್ಲ .

ಒಂದೆರಡು ಕಡೆ ಮಾತುಗಳು ಬಂದವು " ಇವರಿಗೆ ಸಂಜೆಯಾಗುವಾಗ ಕುಡಿಯೋದಕ್ಕೆ ಬೇಕು, ಅದಕ್ಕೋಸ್ಕರ ಈ ರೀತಿ ಬೇಡುತ್ತಾರೆ. ಇವರಿಗೆ ಸ್ವಲ್ಪ ಗಾಂಚಲಿ. ತಿನ್ನೋದು ಕೊಟ್ರೆ ತೆಗೆದುಕೊಳ್ಳಲಾಗುವುದಿಲ್ಲ, ದುಡ್ಡೇ ಬೇಕಂತೆ". 

ಬೇಡುತ್ತಿದ್ದ ಕೈಗಳು ಹಾಗೆಯೇ ಮುಷ್ಟಿ ಮುಚ್ಚಿಕೊಂಡು ಅಲ್ಲಿಂದ ಮುಂದುವರೆದು ಇನ್ನೊಂದು ಕಡೆ ತೆರೆದುಕೊಂಡವು. ಹೀಗೆ ಬೇಡಿ ಬೇಡಿ ಸಿಕ್ಕ ಒಂದಷ್ಟು ಚಿಲ್ಲರೆಗಳನ್ನು ಜೋಡಿಸಿ ಆಸ್ಪತ್ರೆಯ ಬಳಿಗೆ ನಡೆದರು.

ಅವರ ಪ್ರೀತಿಯ ಹೆಂಡತಿಯೇ ಯಾವುದೋ ಜ್ವರಕ್ಕಾಗಿಯೇ ಆಸ್ಪತ್ರೆಯನ್ನು ಸೇರಿದ್ದರು. ಮದ್ದಿಗೆ ದುಡ್ಡಿಲ್ಲ. ಜೊತೆಯಲ್ಲಿ ಇರುವ ಮಕ್ಕಳಿಲ್ಲ. ಸಂಗಾತಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಅವರಿಗಿದೆ. ಒಳಗಿನ ಮಂಚದ ಮೇಲೆ ಮಲಗಿದ್ದ ಹೆಂಡತಿಯ ಉಸಿರು ನಿಂತು ಹೋಗಿತ್ತು. ಕೈಯಲ್ಲಿದ್ದ ಪುಡಿಗಾಸು ಕೆಳಗೆ ಜಾರಿತ್ತು .ಅದು ಶಬ್ದ ಮಾಡಿದರೂ ಅಜ್ಜಿಗೆ ಎಚ್ಚರವಾಗಲಿಲ್ಲ. ಅಗತ್ಯಕ್ಕೆ ದುಡ್ಡು ಸಿಗದೇ ಇದ್ದದ್ದು...ಯಾರಿಂದ ಕಳ್ಳ ಭಿಕ್ಷುಕರಿಂದ… ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ