ಸ್ಟೇಟಸ್ ಕತೆಗಳು (ಭಾಗ ೪೦೬) - ಮಣ್ಣು

ನಿನಗೆ ಅದೆಷ್ಟು ಅಹಂಕಾರ ನನ್ನನೇ ಮಾರಾಟಕ್ಕಿಟ್ಟಿದ್ದೀಯಾ? ನನಗೆ ಬೆಲೆಕಟ್ಟುವ ಅಧಿಕಾರ ನಿನಗೆ ಕೊಟ್ಟವರು ಯಾರು? ನಿನ್ನನ್ನ ಕೊನೆಗೊಂದು ದಿನ ನನ್ನ ಮಡಿಲಿಗೆ ಹಾಕಿಕೊಂಡಾಗ ನಾನ್ಯಾವ ಬೆಲೆಯನ್ನು ಕೇಳಿದವನಲ್ಲ. ಆದರೂ ನೀನು ನನ್ನನ್ನ ತುಂಡುತುಂಡಾಗಿ ವಿಂಗಡಿಸಿ ಬೇಲಿಗಳನ್ನು ಹಾಕಿ ನಿನಗಿಷ್ಟ ಬಂದ ಬೆಲೆಗೆ ಮಾರಾಟ ಮಾಡುತ್ತಿದ್ದೀಯಾ? ನನ್ನ ಬೆಲೆ ಇಷ್ಟೇ ಅಂತ ನಿರ್ಧಾರ ಮಾಡೋದಕ್ಕೆ ನೀನ್ಯಾರು? ಈ ಭೂಮಿಯಲ್ಲಿ ಬದುಕುತ್ತಿರುವ ಸಾವಿರಾರು ಜೀವಿಗಳ ನಡುವೆ ನೀನು ಒಬ್ಬ. ಹಾಗಿರುವಾಗ ಎಲ್ಲವೂ ನಿನ್ನದೇ ಅನ್ನುವ ಅಹಂಕಾರದ ಅಮಲಿನಲ್ಲಿ ತೇಲುತ್ತಿರುವುದು ಯಾಕೆ ? ನನ್ನನ್ನು ಅಗೆದು ಮಾರಾಟ ಮಾಡುತ್ತಿದ್ದೀಯಾ? ಕೊರೆದು ಮಾರಾಟ ಮಾಡುತ್ತಿದ್ದೀಯಾ? ಕಟ್ಟಡಗಳನ್ನ ಇನ್ನೂ ಎತ್ತರಕ್ಕೆ ಏರಿಸಿ ಬೆಲೆ ಹೆಚ್ಚಿಸಿಕೊಳ್ಳುತ್ತಿದ್ದೀಯಾ? ಎಲ್ಲವೂ ನನ್ನಿಂದಲೇ ಸಾಧ್ಯವಾಗಿರುವುದು. ಹಾಗಿರುವಾಗ ನಾನು ಒಂದು ಚೂರು ಅಲ್ಲಾಡಿದರೆ ಪತನವಾಗುತ್ತೀಯಾ...
ನೀನು ನನಗೇನು ನೀಡಿದೆ ಅನ್ನೋದನ್ನ ಒಂದು ಕ್ಷಣ ಯೋಚನೆ ಮಾಡು. ನಿನ್ನಿಂದ ನನಗೆ ಸಿಕ್ಕಿರುವುದು ಬರೀ ಶೂನ್ಯ, ಆದರೆ ನನ್ನಿಂದ ನಿನಗೆ ಶೂನ್ಯಗಳ ಮುಂದೆ ಸಂಖ್ಯೆಗಳು ಬೆಳೆಯುತ್ತಾ ಹೋಗುತ್ತಿದೆ. ನಿನಗೆ ನೆನಪಿರಲಿ ಒಂದು ದಿನ ನನ್ನೊಳಗೆ ಮಲಗೋಕೆ ಬಂದೇ ಬರ್ತಿಯಾ. ನನ್ನೊಳಗೆ ಒಬ್ಬನಾಗಿ ಹೋಗ್ತಿಯಾ ಆದರೂ ನಿನ್ನ ಅಹಂಕಾರ ಕಡಿಮೆಯಾಗಿಲ್ಲ ಅಲ್ವಾ....
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ