ಸ್ಟೇಟಸ್ ಕತೆಗಳು (ಭಾಗ ೪೦೯) - ಬದುಕು

ಸ್ಟೇಟಸ್ ಕತೆಗಳು (ಭಾಗ ೪೦೯) - ಬದುಕು

ಕಾಲೇಜು ಜೀವನಕ್ಕೆ ಪ್ರವೇಶಿಸಿ ಒಂದಷ್ಟು ಸಮಯ ಕಳೆದು ಹೋಗಿತ್ತು. ಆಗಲೇ ಜೀವನದ ಬಗ್ಗೆ ಅದ್ಭುತ ಕನಸುಗಳು ಕಣ್ಣಮುಂದೆ ಕಾಣತೊಡಗಿದವು. ಒಂದಷ್ಟು ಆಸೆಗಳು, ದೊಡ್ಡ ಭವಿಷ್ಯದ ಕನಸು ಕಂಡಿದ್ದ ಅವನ ಜೀವನದಲ್ಲಿ ದೊಡ್ಡ ಬಿರುಗಾಳಿ ಸಂಭವಿಸುವ ಸಣ್ಣ ಸೂಚನೆಯೂ ಅವನಲ್ಲಿರಲಿಲ್ಲ. ಆ ದಿನ ತಂದೆ ಅವನನ್ನು ಬಿಟ್ಟು ಆಗಲಿದರು. ಅವನಲ್ಲಿ ಮಾತಿರಲಿಲ್ಲ. ಕನಸುಗಳೆಲ್ಲ ಬದಿಗೆ ಸರಿದು ಜವಾಬ್ದಾರಿ ಎದುರು ಬಂದು ನಿಂತಿತು. ದೊಡ್ಡ ಕನಸುಗಳೆಲ್ಲವೂ ಮನೆ ನಡೆಸುವ ಕಡೆಗೆ ದಾರಿ ಹಿಡಿದವು. ಅಪ್ಪ ನಡೆಸುತ್ತಿದ್ದ ಸೌಂಡ್ ಸಿಸ್ಟಮ್ ಮನೆಗೆ ಆಧಾರವಾಗಿತ್ತು. ಅದನ್ನೇ ಮುಂದುವರಿಸುವ ಮನಸ್ಸು ಮಾಡಿ ಹೆಜ್ಜೆ ಇಡಲಾರಂಭಿಸಿದ. ತಂದೆ ಜೊತೆಗೆ ಸುಮ್ಮನೆ ಹೋಗುತ್ತಿದ್ದ ಹುಡುಗನಿಗೆ ಬದುಕುವುದಕ್ಕೆ ಕೆಲಸವೊಂದರ ಅವಶ್ಯಕತೆ ಇತ್ತು. ಶಿಕ್ಷಣ ಮುಗಿದ ಕೂಡಲೇ ಕನಸುಗಳನ್ನ ಮೂಟೆ ಕಟ್ಟಿ ಮನೆಯ ಅಟ್ಟಕ್ಕೇರಿಸಿ ಇದೇ ಕೆಲಸವನ್ನ ಪೂರ್ಣ ಅವಧಿಯಲ್ಲಿ ಮುಂದುವರಿಸಿದ. ಪ್ರೀತಿ ಸಂಪಾದಿಸಿದ, ಬಳಗ ಹೆಚ್ಚಿಸಿಕೊಂಡ 

ದುಡಿಮೆ ಭದ್ರವಾಯಿತು. ಬೀಳುತ್ತಿದ್ದ ಮನೆಗೆ ಊರುಗೋಲಾಗಿ ನಿಂತುಬಿಟ್ಟ. ಈಗಲೂ ಕನಸುಗಳು...ಸಾವಿರವಿದ್ದರೂ ವೇದಿಕೆಯಲ್ಲಿ ಹಾಡು ಹೇಳುವಾಗ, ನೃತ್ಯಮಾಡುವಾಗ ಸಂಭ್ರಮಪಡುವ ಎಲ್ಲದಕ್ಕೂ ಸೌಂಡ್ ವ್ಯವಸ್ಥೆ ಮಾಡುತ್ತಾನೆ. ಎಲ್ಲವನ್ನೂ ನೋಡಿಕೊಂಡು ತುಟಿಯಂಚಲಿ ನಕ್ಕು ಕಣ್ಣಂಚಿನ ಕಣ್ಣೀರನ್ನ ಹಾಗೆಯೇ ಉಳಿಸಿಕೊಂಡು ತನ್ನ ಕಳೆದುಹೋದ ದಿನಗಳನ್ನು ಒಮ್ಮೆ ಯೋಚಿಸಿ ಜವಾಬ್ದಾರಿಯನ್ನು ಗಂಟಲಲ್ಲಿ ನುಂಗಿಕೊಂಡು ಮುಂದುವರಿಯುತ್ತಾನೆ. ಕಾಲೇಜು ಕಾರ್ಯಕ್ರಮದಲ್ಲಿ ಹುಡುಗರ ಸಂಭ್ರಮ ಹೆಚ್ಚಿಸಲು ಶಬ್ದವನ್ನು ಇನ್ನಷ್ಟು ಹೆಚ್ಚಿಸುತ್ತಾನೆ. ನೋವಿನಿಂದ ಮೌನವಾಗುತ್ತಾನೆ. ಬದುಕಿನ ತಿರುವುಗಳಲ್ಲಿ ಏನೆಲ್ಲ ಕಾದು ಕೂತಿದೆ ಅನ್ನೋದು ಬದುಕಿದವರಿಗೆ ಮಾತ್ರ ಗೊತ್ತು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ