ಸ್ಟೇಟಸ್ ಕತೆಗಳು (ಭಾಗ ೪೧೫) - ಅಮ್ಮ

ಸ್ಟೇಟಸ್ ಕತೆಗಳು (ಭಾಗ ೪೧೫) - ಅಮ್ಮ

ಆಗಾಗ ಅಮ್ಮನ ಜೊತೆ ಪೇಟೆಗೆ ಹೋಗ್ತಾ ಇರುತ್ತೇನೆ. ಪ್ರತಿ ಸಲವೂ ಅಮ್ಮ ನನ್ನ ಕೈ ಹಿಡಿದು ರಸ್ತೆ ದಾಟಿಸುತ್ತಾರೆ. ಆದರೆ ನಿನ್ನೆ ಅಮ್ಮ ಕೈಹಿಡಿದು ರಸ್ತೆ ದಾಟಿಸುವಾಗ ಎಂದಿಗಿಂತಲೂ ಕೈಯನ್ನು ಬಿಗಿಯಾಗಿ ಹಿಡಿದಿದ್ದರು. ಆ ಹಿಡಿತದಲ್ಲಿ ಅಮ್ಮನ ಮನಸಲ್ಲಿ ದಿನವು ಓಡುತ್ತಿದ್ದ ಯೋಚನೆಗಳಿಗಿಂತ ವಿಭಿನ್ನವಾಗಿಯೇ ಏನೋ ಓಡುತ್ತಿದೆ ಅನ್ನೋ ಸತ್ಯ ಅರಿವಾಯಿತು.  ಆದರೆ ಅಮ್ಮನಲ್ಲಿ ಕೇಳಿದರೆ ಅವರು ನಿಜ ಹೇಳೋದೇ ಇಲ್ಲ, ಏನಾದರೂ ಹೇಳಿ ಮಾತನ್ನು ಓಡಿಸುತ್ತಾರೆ. ಅಮ್ಮನ ಮನಸಲ್ಲಿ ಓಡುತ್ತಿರುವ ಯೋಚನೆಯಾದರೂ ಏನು? ಮಗನ ಮುಂದಿನ ಓದಿಗೆ ದುಡ್ಡು ಹೊಂದಿಸುವುದು ಹೇಗೆ?, ಮನೆಯ ಕಷ್ಟದ ಪರಿಸ್ಥಿತಿ ನಿಭಾಯಿಸುವುದು ಹೇಗೆ? ಮೊನ್ನೆ ತಾನೆ ಸಾಲದವರು ಮನೆಗೆ ಬರುತ್ತೇನೆ ಅಂದಿದ್ದಾರೆ? ಈಗ ಬಂದು ಜಾಗದ ಪತ್ರ ಕೇಳಿದರೆ ಏನು? ಇಷ್ಟು ದುಡ್ಡು ಖರ್ಚುಮಾಡಿ ಮಗ ಓದದಿದ್ದರೆ ಪರಿಸ್ಥಿತಿ ಹೇಗೆ? ನನ್ನ ಮಗನನ್ನು ಓದಿಗೆ ದೂರದೂರಿಗೆ ಕಳಿಸುತ್ತಿದ್ದೇನೆ ಅಲ್ಲವನು ಓದದಿದ್ದರೆ ಊರವರು ಏನನ್ನಬಹುದು? ನನ್ನ ಮಗ ಕೆಟ್ಟ ಸಹವಾಸ ಮಾಡಿದರೆ  ಹೇಗೆ? ನಮ್ಮ ಮನೆ ದನ ಈಗ ಹಾಲು ಕೊಡುವುದನ್ನು ಕಡಿಮೆ ಮಾಡಿದೆ ಯಾಕೆ ? ಈ ಸಲದ ಜೋರು ಮಳೆಗೆ ಮನೆ ಸೋರುತ್ತಿದೆ, ಅದನ್ನು ಸರಿಪಡಿಸುವುದು ಯಾವಾಗ? ಹೀಗೆ ಅಮ್ಮನ ಮನಸ್ಸೊಳಗೆ ಓಡುತ್ತಿರುವ ಪ್ರಶ್ನೆಗಳೇನು ಅಂತ ಗೊತ್ತಿಲ್ಲ. ಆದರೆ ರಸ್ತೆ ದಾಟಿದ ಕೂಡಲೇ ಅಮ್ಮನ ಹೆಗಲಿಗೆ ಕೈಹಾಕಿ ಒಮ್ಮೆ ಗಟ್ಟಿಯಾಗಿ ಅದುಮಿ "ಅಮ್ಮ ನೀನ್ನ ಜೊತೆಗೆ ನಾನಿದ್ದೇನೆ ಅಂತ ಅಂದು ಅವರ ಕೈಹಿಡಿದು ಮುಂದೆ ನಡೆಯುಲು ಆರಂಭ ಮಾಡಿದೆ. ಅಮ್ಮನ ಮನಸ್ಸಲ್ಲಿ ಒಂದಷ್ಟು ಧೈರ್ಯ ಬಂದಿರಬಹುದು ಅಂತ ಅನಿಸ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ