ಸ್ಟೇಟಸ್ ಕತೆಗಳು (ಭಾಗ ೪೧೬) - ಸಂತೋಷ

ಸ್ಟೇಟಸ್ ಕತೆಗಳು (ಭಾಗ ೪೧೬) - ಸಂತೋಷ

ಅಬ್ಬಾ.. ಈ ಜೀವನವೇ ಬೇಡ ಅನಿಸಿಬಿಟ್ಟಿದೆ. ಒಂದು ದಿನವೂ ಸರಿಯಾಗಿ ನೆಮ್ಮದಿಯಿಲ್ಲ. ಖುಷಿ ಇಲ್ಲ. ನನಗೆ ನನ್ನ ಜೀವನದಲ್ಲಿ ಸಂತೋಷವೇ ಇಲ್ಲ ಅಂತ ಅನಿಸ್ತಿದೆ. ಬಯಸಿದ್ದು ಯಾವುದೂ ಕೈಗೊಡುತ್ತಿಲ್ಲ. ಕೈಗೆ ಸಿಕ್ತಾ ಇಲ್ಲ. ಸುಮ್ಮನೆ ಕನಸುಗಳನ್ನು ಹೊತ್ತುಕೊಂಡು ಜೀವನವನ್ನ ಸಾಗಿಸ್ತಾ ಇದ್ದೇನೆ ಹೊರತು ಯಾವ ಕನಸುಗಳು ನೆರವೇರುತ್ತಿಲ್ಲ. ಇದು ನನ್ನ ಪ್ರತಿ ದಿನದ ಕೊರಗು. 

ನನಗೆ ಎಲ್ಲಿ ಹೋದರೂ ಯಾರೇ ಸಿಕ್ಕರೂ ಈ ಮಾತುಗಳನ್ನು ಅವರಲ್ಲಿ ಹೇಳಿ ಬರುತ್ತಿದ್ದೆ. ಆದರೆ ಅವತ್ತು ಅವರು ಕೈ ಹಿಡಿದು ನಿಲ್ಲಿಸಿ ಒಂದು ಮಾತು ಹೇಳಿದ್ರು, "ನೋಡು ಸಂತೋಷ ಅನ್ನೋದು ಸಿಗದೇ ಇರೋದನ್ನ ಯೋಚನೆ ಮಾಡುತ್ತಾ ಮುಂದೊಂದು ದಿನ ಅದು ನನ್ನ ಕೈಗೂಡುತ್ತೆ ಅಂತ ಬಯಸುವುದಲ್ಲ. ಸಿಕ್ಕಿರುವುದರಲ್ಲಿ ಇರೋ ಪರಿಮಿತಿಯೊಳಗೆ ಅದನ್ನು ಅನುಭವಿಸುವುದು. ಹುಟ್ಟಿದ ಪ್ರತಿಯೊಬ್ಬ ಜೀವಿಗೂ ಸಂತೋಷವಿದೆ. ಪ್ರತಿಯೊಬ್ಬರೂ ಅದನ್ನ ಅನುಭವಿಸಲು ಸಾಧ್ಯ. ಯಾವಾಗ ನಮ್ಮ ಮನೆಯನ್ನು ಬಿಟ್ಟು ಪಕ್ಕದ ಮನೆ ಕಡೆಗೆ ದೃಷ್ಟಿ ಹಾಯಿಸುತ್ತಾ ಅವರ ಸಂತೋಷ ಪಡೆಯಲೇಬೇಕು ಅನ್ನುವ ಹಟಕ್ಕೆ ಬಿದ್ದಾಗ ನಮಗೆ ಸಿಕ್ಕಿರುವ ಸಂತೋಷ ಕಾಣೋದೇ ಇಲ್ಲ. ಅದಕ್ಕಾಗಿ ಮೊದಲು ಸಿಕ್ಕಿದ್ದನ್ನು ಅನುಭವಿಸುತ್ತಾ ಹೊದ ಹಾಗೆ ಸಂತೋಷ ತನ್ನಿಂದ ತಾನಾಗೇ ಸದಾ ನಿನ್ನ ಜೊತೆ ಇರುತ್ತದೆ.  ಅಂದಿನಿಂದ ಪ್ರತಿಯೊಂದನ್ನು ಅನುಭವಿಸುತ್ತಿದ್ದೇನೆ. ಈಗ ಬದುಕು ಅದ್ಭುತವಾಗಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ