ಸ್ಟೇಟಸ್ ಕತೆಗಳು (ಭಾಗ ೪೧೮) - ಚಕ್ರ

ಸ್ಟೇಟಸ್ ಕತೆಗಳು (ಭಾಗ ೪೧೮) - ಚಕ್ರ

ತಾವು ಸಾಗಿದ ದಾರಿಗಳ ಕಥೆಯನ್ನು ಅಲ್ಲಿ ಜೊತೆಯಾಗಿ ಕುಳಿತುಕೊಂಡು ಮಾತನಾಡುತ್ತಿದ್ದಾರೆ. ವ್ಯರ್ಥವಾಗಿ ಬೇಡವೆನಿಸಿದೆ ವಸ್ತುಗಳೆಲ್ಲವೂ ಒಂದು ಮೂಲೆಯಲ್ಲಿ ಪೇರಿಸಲ್ಪಟ್ಟಿದೆ. ಮಾತನಾಡುತ್ತಿರುವವರು ನಮ್ಮ ನಿಮ್ಮ ಹಾಗೆ ಮನುಷ್ಯರಲ್ಲ... ಚಕ್ರಗಳು. ಸಾಗಿದ ಹಾದಿ, ತಿರುಗಿದ ತಿರುವು, ಹಾಕಿದ ಬ್ರೇಕು, ಒಂದಷ್ಟು ಪಂಚರ್ ಗಳು ಕೆಲವೊಂದು ಅಪಘಾತ ಎಲ್ಲವನ್ನೂ ತುಂಬಾ ರಸವತ್ತಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಇಲ್ಲಿ ಅವುಗಳದ್ದೇನೂ ತಪ್ಪುಗಳಿಲ್ಲ. ತಮ್ಮನ್ನ ಚಲಾಯಿಸುವವನು ತೋರಿದ ಕಡೆಗೆ ಹೋಗುತ್ತಿದ್ದದ್ದು. ಕೆಲಸವನ್ನು ಶ್ರದ್ಧೆಯಿಂದ ಮಾಡಿ ಕೊನೆಗೊಂದು ದಿನ ತನ್ನ ಸೇವಾವಧಿಯನ್ನು ಮುಗಿಸಿಕೊಂಡು ಮೂಲೆಗೆ ಹೋಗಿ ಬಿದ್ದಿದ್ದಾರೆ. ರಾಜ್ಯ, ಹಳ್ಳಿ, ಪೇಟೆ, ಗದ್ದೆ ತೋಟ ಎಲ್ಲವೂ ಕೂಡ ಕಥೆಯೊಳಗೆ ಹಾದುಹೋಗುತ್ತಿವೆ. "ನಾವು ಸವೆದು, ತೂತಾಗಿ, ತುಂಡಾದ ಕಾರಣ ಎಲ್ಲರೂ ದೂರ ತಳ್ಳಿದ್ದಾರೆ. ಯಾರೂ ಕೂಡ ನಮ್ಮ ನೆನಪಿಟ್ಟುಕೊಂಡು ಇಲ್ಲ. ಇಷ್ಟು ದಿನ ಎಲ್ಲರೂ ಬಳಸುವವರೇ ನಮ್ಮಿಂದ ಏನು ಉಪಯೋಗವಿಲ್ಲವೆಂದಾಗ ದೂರ ತಳ್ಳುತ್ತಾರೆ ಅದಕ್ಕಾಗಿ ವಿರಹ ವೇದನೆ ಪಡುವುದಕ್ಕಿಂತ ನಮ್ಮ ಹೊಸ ರೂಪ ಹೊಸ ಬದಲಾವಣೆಯನ್ನು ಒಗ್ಗಿಕೊಂಡು ಬದುಕಬೇಕು ಅಥವಾ ಮೌನವಾಗಿ ಎಲ್ಲವನ್ನೂ ನೋಡಬೇಕು..

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ