ಸ್ಟೇಟಸ್ ಕತೆಗಳು (ಭಾಗ ೪೨೩) - ಹಿಂಬಾಲಿಸು

ಯಾವುದೋ ತುರ್ತು ಅಗತ್ಯಕ್ಕಾಗಿ ರಸ್ತೆಯಲ್ಲಿ ಗಾಡಿಯನ್ನು ಚಲಾಯಿಸುತ್ತಿದ್ದೆ. ದೊಡ್ಡ ಅಗಲವಾದ ರಸ್ತೆಗಳು ಎಲ್ಲರೂ ವೇಗವಾಗಿ ಸಾಗುವವರೇ... ಅದಕ್ಕಾಗಿ ಮುಂದೆ ಚಲಿಸುತ್ತಿದ್ದ ಕಾರೊಂದರ ಹಿಂಬದಿಯಲ್ಲಿ ಅದರದೇ ವೇಗಕ್ಕೆ ನನ್ನದೇ ವೇಗವನ್ನು ಸರಿದೂಗಿಸಿಕೊಂಡು ಓಡಿಸಲಾರಂಭಿಸಿದೆ. ಅದನ್ನ ತೊರೆದು ಮುಂದೆ ಹೋಗುವ ಧೈರ್ಯವಿರಲಿಲ್ಲ. ಅದಕ್ಕಾಗಿ ಅದು ಸಾಗಿದ ದಾರಿಯಲ್ಲಿ ನನ್ನದೇ ಪಯಣ ಅಂದುಕೊಂಡು ನಂಬಿ ಮುನ್ನಡೆದೆ. ಆದರೆ ಒಂದೊಂದೆಡೆಗಳಲ್ಲಿ ಕಾರಿಗೆ ಸಣ್ಣ ಗುಂಡಿ ಅನಿಸಿದ್ದು ನಾನು ಚಲಾಯಿಸುತ್ತಿದ್ದ ಬೈಕಿಗೆ ದೊಡ್ಡ ಗುಂಡಿಯಾಯಿತು ಕೆಲವೊಂದು ಕಡೆ ನನ್ನ ಗಾಡಿ ರಸ್ತೆಯಲ್ಲಿ ಬಿದ್ದು ನನಗೆ ಸಣ್ಣ ಪುಟ್ಟ ಗಾಯಗಳಾದವು. ಅಂದರೆ ಹಿಂಬಾಲಿಸಬೇಕು ಆದರೆ ಎಲ್ಲಿ ಹೇಗೆ ಅನ್ನುವುದರ ಅರಿವು ಇರಬೇಕು. ಮುಂದೆ ಚಲಿಸುತ್ತಿದ್ದವರನ್ನ ಕಣ್ಣು ಮುಚ್ಚಿ ಹಿಂಬಾಲಿಸಿದರೆ ಹೀಗೇ ಆಗೋದು. ಹಿಂಬಾಲಿಸುವ ಮೊದಲು ಯೋಚನೆ ಮಾಡಬೇಕು. ನನ್ನ ಕಣ್ಣ ಮುಂದಿನ ಹಾದಿ, ನನ್ನ ನಿರ್ಧಾರ ಆಗಿದ್ದರೆ ನನ್ನ ಬದುಕು ಅದ್ಭುತ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ