ಸ್ಟೇಟಸ್ ಕತೆಗಳು (ಭಾಗ ೪೨೪) - ಶ್ಯಾಮರಾಯರು

ಸ್ಟೇಟಸ್ ಕತೆಗಳು (ಭಾಗ ೪೨೪) - ಶ್ಯಾಮರಾಯರು

ಬೆನ್ನಿನ ಮೇಲೆ ಅವನ ಕೂರಿಸಿಕೊಂಡು ಉಪ್ಪು ಮೂಟೆ ಮಾಡಬೇಕು. ಅವನ ಪಾದಗಳನ್ನು ಎದೆಯ ಮೇಲಿಟ್ಟು ಕುಣಿಸಬೇಕು. ಎಲ್ಲಾ ಕನಸು ಕಾಣುತ್ತಿದ್ದವರು ಶ್ಯಾಮರಾಯರು. ಮಗನು ಇಷ್ಟಪಟ್ಟ ಹಾಗೆ ಮದುವೆ ಮಾಡಿಸಿಕೊಟ್ಟು ಮೊಮ್ಮಗನ ಕನಸು ಕಾಣುತ್ತಿದ್ದರು. ಮಗನಿಂದ ಯಾವುದೇ ಉತ್ತರ ಬರುತ್ತಿಲ್ಲ. ದೊಡ್ಡ ಕೆಲಸಕ್ಕಾಗಿ ಊರುಬಿಟ್ಟಿದ್ದಾನೆ. ಊರಿಗೆ ಬರುವ ಸಣ್ಣ ಯೋಚನೆಯೂ ಅವನಲ್ಲಿಲ್ಲ. ಹಳ್ಳಿ ಮನೆಯನ್ನು ಬಿಟ್ಟು ನೆನಪುಗಳನ್ನು ತೊರೆದು ಪಟ್ಟಣಕ್ಕೆ ಹೋಗೋದಕ್ಕೆ ಶ್ಯಾಮರಾಯರಿಗೆ ಮನಸ್ಸಿಲ್ಲ. ಮೊಮ್ಮಗನಿಗೆ ಹಳ್ಳಿಯ ಗದ್ದೆ ತೋಟಗಳ ಖುಷಿ, ಬಿಸಿ ಬಿಸಿ ತಿಂಡಿ, ತುಂತುರು ಮಳೆಯ ಜೊತೆಗೆ ಆಟವಾಡುತ್ತಾ ಬದುಕಿನ ಅದ್ಭುತಗಳನ್ನು ತೋರಿಸಬೇಕು. "ಜೋರು ಮಳೆ ಮಗನಿಗೆ ಜ್ವರ ಬರುತ್ತೆ, ಅಜ್ಜನ  ಜೊತೆಗೆ ಮಲ್ಕೊಂಡು ಅಭ್ಯಾಸವಿಲ್ಲ ಕಳ್ಸೋದಕ್ಕೆ ಆಗೋದಿಲ್ಲ " ಅನ್ನೋ ಮಗನ ಮಾತು ಕೇಳಿ ಒಂದು ಸಲ ಶ್ಯಾಮರಾಯರಿಗೆ ಇವನಾ ನನ್ನ ಮಗಾನ ಅನ್ನಿಸಿತು. ನಾನು ಮಗನಿಗೆ ತೋರಿಸಿದ ಎಲ್ಲ ಜಗತ್ತನ್ನು ಮೊಮ್ಮಗನಿಗೆ ತೋರಿಸುವ ಆಸೆ, ನೆರಿಗೆ ಬಂದಿರುವ ಮುಖದಲ್ಲಿ ಸಂಭ್ರಮ  ಕುಣಿಯುತ್ತಿತ್ತು. ದೇಹ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ,  ಊಟ-ತಿಂಡಿ ಕೆಲಸಗಳಿಗೆ ಮನೆಕೆಲಸದವಳಿದ್ದರೂ ಸ್ವಂತ ಖುಷಿಯಿಲ್ಲ.  ಬದುಕಿನ ಖುಷಿ ಮಗನಿಗೆ ಅರ್ಥವಾಗಬೇಕಾದರೆ ಅವನಿಗೊಬ್ಬ ಮೊಮ್ಮಗ ಬರಬೇಕು. ಬದುಕುವಾಗ ಒಂದಿಷ್ಟು ಕಣ್ಣು ಹೃದಯವನ್ನು ತೆರೆದಿಟ್ಟು ಗಮನಿಸಿ. ಬದುಕು ಬೀದಿಯಲ್ಲಿ ಕೊಳೆಯುವುದು ತಪ್ಪುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ