ಸ್ಟೇಟಸ್ ಕತೆಗಳು (ಭಾಗ ೪೨೫) - ಚಲನೆ

ಸ್ಟೇಟಸ್ ಕತೆಗಳು (ಭಾಗ ೪೨೫) - ಚಲನೆ

ಮುಂದೆ ದಾರಿ ಕಾಣುತ್ತಿಲ್ಲ ಆದರೆ ಇಲ್ಲಿಯವರೆಗೆ ತಲುಪಿದ ದಾರಿ ಅಷ್ಟು ಸುಲಭವಾಗಿರಲಿಲ್ಲ. ಪೂರ್ತಿ ಕತ್ತಲೆಯಲ್ಲಿ ಕತ್ತಲೆಯನ್ನೇ ಬೆಳಕಾಗಿಸಿಕೊಂಡು ಅಂದಾಜಿನ ಮೇಲೆ ಮುಂದುವರೆದು ಬಂದೆ. ಆದರೆ ಈಗ ಕತ್ತಲೆಯಲ್ಲಿ ಏನೂ ಕಾಣಿಸುತ್ತಿಲ್ಲ. ಮುಂದೇನು ಅನ್ನುವ ಪ್ರಶ್ನೆಯೊಂದೇ ಉಳಿದುಬಿಟ್ಟಿದೆ. ಪ್ರತಿ ಒಂದು ಹೆಜ್ಜೆ ಇಡುವಾಗಲೂ ಮುಂದಿನ ನೆಲದ ಒಂದಷ್ಟು ಭಾಗ ಸಿಕ್ಕಿದ ನಂತರವೇ ಪೂರ್ತಿ ಭಾರವನ್ನು ಇನ್ನೊಂದು ಪಾದಕ್ಕೆ ವರ್ಗಾಯಿಸುತ್ತಿದ್ದೆ. ತುಂಬಾ ಎತ್ತರವನ್ನು ಏರಿದ್ದೇನೆ ಎನಿಸುತ್ತಿದೆ. ಹಾಗಾಗಿ ಇಲ್ಲೆಷ್ಟೇ ತಡಕಾಡಿದರೂ ಮುಂದಿನ ನೆಲ ಸಿಗುತ್ತಿಲ್ಲ. ಮುಂದೆ ಆಳವಾದ ಹೊಂಡವೋ, ಸಣ್ಣ ಗುಂಡಿಯೋ ಅರಿವಿಲ್ಲ. ಹಿಂದೆ ಯಾವುದೇ ತೊಂದರೆಯಾಗಿಲ್ಲ ಅನ್ನೋ ಕಾರಣಕ್ಕೆ ನಂಬಿ ಮುಂದೆ ಹೆಜ್ಜೆ ಇಡುವುದು ಅಥವಾ ಒಂದು ಪ್ರಯತ್ನಿಸೋಣ ಅನ್ನೋ ಕಾರಣಕ್ಕೆ ಮುಂದುವರಿಯುವುದು ಗೊತ್ತಿಲ್ಲ. ನಾನೀಗ ಹೆಜ್ಜೆಯಿಟ್ಟು ಬಿಟ್ಟರೆ ಇದರಿಂದ ನನಗೂ ಒಂದಷ್ಟು ಪಾಠ. ನನ್ನ ಹಿಂದಿರುವ ಅವರಿಗೆ ದಾರಿ ಸಿಗಬಹುದು. ಸುಮ್ಮನೆ ನಿಂತು ಸಮಯ ವ್ಯರ್ಥ ಮಾಡುವುದಕ್ಕಿಂತ ಮುಂದೆ ಹೆಜ್ಜೆಯಿಟ್ಟು ಬಿಡೋಣ. ಹೆಜ್ಜೆ ತಪ್ಪಿದರೆ ಗಾಳಿಯಲ್ಲಿ ಹಾರುವ ಕ್ಷಣಗಳನ್ನು ಆನಂದಿಸಬಹುದು, ನೆಲವಿದ್ದರೆ ಮುಂದಿನ ಹೆಜ್ಜೆಗಳಿಗೆ ಒಂದು ಹಂತ ಮೇಲೇರಿದಂತಾಗುತ್ತದೆ. ಚಲನೆ ಅನ್ನೋದು ಮಾತ್ರ ಜೀವಂತವಿರುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ