ಸ್ಟೇಟಸ್ ಕತೆಗಳು (ಭಾಗ ೪೨೮) - ಸಾವಿಗೂ ವಾಕರಿಕೆ
ಸಾವು ಮೌನವಾಗಿ ಬದಿಯಲ್ಲಿ ನಿಂತು ನೋಡುತ್ತಿದೆ. ಈ ಸಾವುಗಳನ್ನು ಅದು ಬಯಸುತ್ತಿಲ್ಲ. ನೆಮ್ಮದಿಯ ಬದುಕನ್ನ ಸಾಗಿಸಿ, ಜೀವನದ ಎಲ್ಲಾ ಕಷ್ಟ ಸುಖಗಳನ್ನು ಅನುಭವಿಸಿ ನಂತರ ಸಾವು ಬಂದು ಕರೆದುಕೊಂಡು ಹೋಗುವುದು ವಾಡಿಕೆ. ಆದರೆ ಇತ್ತೀಚಿಗೆ ಸಾವಿನ ಕೆಲಸವನ್ನು ಮನಸ್ಸುಗಳು ಮಾಡಲಾರಂಭಿಸಿದ್ದಾವೆ. ಎಲ್ಲದಕ್ಕೂ ಸಾವೇ ಪರಿಹಾರವಾಗಿದ್ದರೆ ಬದುಕಿನ ನಿಲ್ದಾಣದಲ್ಲಿ ಯಾರೂ ನಿಲ್ಲುತ್ತಿರಲಿಲ್ಲ. ಎಲ್ಲರೂ ಸಾವಿನ ಮನೆಗೆ ಹೊರಟು ಹೋಗ್ತಾ ಇದ್ದರು. ನಾನು ಕಾಲಿಟ್ಟ ಮಣ್ಣು, ನನ್ನ ಮನೆಯ ವಾತಾವರಣ ನಾನು ಸೇವಿಸಿರೋ ಗಾಳಿ ನನಗೆ ನನ್ನ ನೆಲದ ಸಂಸ್ಕೃತಿಯನ್ನ ಕಲಿಸಿಲ್ಲ ಅಂದಮೇಲೆ ನಾನು ಈ ನೆಲದವನೇ ಅಲ್ಲ. ಸಾವಿಗೂ ವಾಕರಿಕೆ ಬರುವಂತಹ ಕಾಲಮಾನದಲ್ಲಿ ಬದುಕುತ್ತಿರುವುದು ನಮ್ಮ ದುಸ್ಥಿತಿಯನ್ನು ಸೂಚಿಸುತ್ತದೆ. ಕನಸುಗಳು ಬದುಕಿ ನನಸಾಗುವ ಕ್ಷಣದಲ್ಲಿ ಗುಳ್ಳೆಗಳಂತೆ ಹೊಡೆದು ಹೋಗಿ ಮಾಯವಾಗುವ ಇಂತಹ ಸ್ಥಿತಿ ಯಾರಿಗೂ ಬೇಡ. ದೇಹದ ರಕ್ತವನ್ನು ನೆಲಕ್ಕೆ ಹರಿಸಿ ವಿಕೃತ ಆನಂದದ ಜೊತೆಗೆ ಬದುಕುವ ಮನಸ್ಸುಗಳು ಭೂಮಿ ಮೇಲೆ ಇರೋದು ವಿಪರ್ಯಾಸ .ಕಷ್ಟವಾಗುತ್ತಿದೆ. ಸುತ್ತಮುತ್ತಲಲ್ಲಿ ನಮ್ಮವರು ಯಾರು? ಅಲ್ಲದವರು ಯಾರು ?ಅನ್ನೋದನ್ನು ತಿಳಿದುಕೊಳ್ಳಲು....
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ