ಸ್ಟೇಟಸ್ ಕತೆಗಳು (ಭಾಗ ೪೨) - ಆತ

ಸ್ಟೇಟಸ್ ಕತೆಗಳು (ಭಾಗ ೪೨) - ಆತ

ರಾತ್ರಿಯ ಒಳಗೆ ಕೆಲಸವನ್ನು ಮುಗಿಸಲೇ ಬೇಕಾದ್ದರಿಂದ ಕಾಲೇಜಿನಲ್ಲಿದ್ದೆ. ಗಡಿಯಾರ ತನ್ನ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿತ್ತು. ಕೆಲಸ ಮುಗಿಸಿ ತಲೆಯೆತ್ತಿದಾಗ ಮುಳ್ಳು 9 ರ ಜೊತೆ ಮಾತನಾಡುತ್ತಿತ್ತು. ನನ್ನ ರೂಮಿಗೆ ಹೊತ್ತೊಯ್ಯುವುದೇ  ಬೈಕು. ಮಳೆ ಹನಿ ಮೂಡಿ ಮರೆಯಾಗುತ್ತಿತ್ತು. ಗಾಡಿಯೊಳಗಿನ ಪೆಟ್ರೋಲ್ ಪ್ರಮಾಣದ ಅರಿವಿಲ್ಲ. ಅಲ್ಲಾಡಿಸಿದಾಗ ತಿಳಿದ ಶಬ್ದದಿಂದ ರೂಮು ತಲುಪಬಹುದು ಎಂಬ ನಂಬಿಕೆಯಿಂದ ಗಾಡಿ ಆರಂಭಿಸಿ ಗೇರು ಬದಲಾಯಿಸಿ ಎಕ್ಸಲೇಟರ್ ಅದುಮಿದೆ. ವೇಗ ಪಡೆದು ಗಾಳಿಯನ್ನು ಮುತ್ತಿಡುತ್ತಾ ಮಾತನಾಡಿಸುತ್ತಾ ಸಾಗುತ್ತಿತ್ತು ಬೈಕು. ತಲುಪೋಕೆ ಮೂರು ಕಿಲೋಮೀಟರ್ ಇದೆ ಅನ್ನುವಾಗ ಹೊಸದಾದ ಶಬ್ದದಿಂದ ಮಾತನಾಡುತ್ತಾ, ಉಸಿರು ಕಟ್ಟುತ್ತಾ ಒಂದು ಕಡೆ ಸ್ತಬ್ದವಾಯಿತು. ಮತ್ತೆ ಎಷ್ಟೇ ಪ್ರಯತ್ನಿಸಿದರೂ ಸ್ಟಾರ್ಟ್ ಆಗಲಿಲ್ಲ. ಶಬ್ದ ಮೊದಲ ಸಲ ಸುಳ್ಳು ಹೇಳಿತ್ತು. ತಳ್ಳುವುದು ಬಿಟ್ಟು ಬೇರೆ ದಾರಿ ಕಾಣದೆ ಹನಿಗಳ ಜೊತೆ ಮಾತನಾಡುತ್ತಾ ಸಾಗಿದೆ. ಇನ್ನೂ ಪೆಟ್ರೋಲ್ ಪಂಪ್ ತಲುಪೋಕೆ ಎರಡು ಕಿಲೋಮೀಟರ್ ಇದೆ. ನೀರಿನ ಹನಿಯು ಬೆವರಿನ ಜೊತೆ ಸಮ್ಮಿಳಿತಗೊಂಡು ಇಳಿಯುತ್ತಿತ್ತು. ಆಗಲೇ ನನ್ನ ಮುಂದಿನಿಂದ ಸಾಗಿದವನೊಬ್ಬ ಗಾಡಿ ನಿಲ್ಲಿಸಿದ." ಬನ್ನಿ ಸರ್ ನಾನು ಅಲ್ಲಿವರೆಗೂ ಜೊತೆ ಬರುತ್ತೇನೆ,  ನೀವು ಗಾಡಿಲಿ ಕುಳಿತುಕೊಳ್ಳಿ  ಸರ್ ಅಲ್ಲಿವರೆಗೂ ತಲುಪಬಹುದು" ಅಂದ. ನನಗೆ ಅರ್ಥವೇ ಆಗಲಿಲ್ಲ. ಮುಖನೋಡಿ ಗಾಡಿಯನ್ನೇರಿದೆ. ನನ್ನ ಬೈಕಿನ ಸೈಲೆನ್ಸರ್ ನ ಮೇಲೆ ಕಾಲಿನಿಂದ ತಳ್ಳುತ್ತಾ ತಳ್ಳುತ್ತಾ ಪೆಟ್ರೋಲ್ ಪಂಪ್ ತಲುಪಿಸಿದ.  "ಧನ್ಯವಾದಗಳು ಸರ್, ನಿಮ್ಮ ಹೆಸರು?" ಇಂದು ತಿರುಗುವಷ್ಟರಲ್ಲಿ ಎಕ್ಸಲೇಟರ್ ಅದುಮಿ  ಮಾಯವಾಗಿದ್ದ. ನನಗೆ ಅವನ ಮುಖ ಪರಿಚಯ ಇಲ್ಲ, ಗಾಡಿ ಸಂಖ್ಯೆ ಗೊತ್ತಿಲ್ಲ. ನನಗನ್ನಿಸಿದ್ದಿಷ್ಟೆ, ಯಾರದ್ದೋ ಕಷ್ಟಕ್ಕೆ ನಾವು ಸ್ಪಂದಿಸಿದರೆ ನಮಗೆ ಎಲ್ಲಿಂದಲೂ, ಯಾವಾಗಲಾದರೂ ಅದು ಪ್ರತಿಫಲವಾಗಿ ಬಂದೇ ಬರುತ್ತದೆ. ಅವನು ಮಾಡಿದ ಸಹಾಯವನ್ನು ಇನ್ನೊಬ್ಬರಿಗೆ ದಾಟಿಸಬೇಕಾದ ಜವಾಬ್ದಾರಿ ನನ್ನ ಮೇಲಿದೆ. ಗಾಡಿಗೆ ಪೆಟ್ರೋಲ್ ಕುಡಿಸಿ ರೂಮು ತಲುಪಿದೆ.... ಆತ ನೆನಪಾಗುತ್ತಿದ್ದ.....ಜವಾಬ್ದಾರಿ ನೆನಪಿಸುತ್ತಿದ್ದ.

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ