ಸ್ಟೇಟಸ್ ಕತೆಗಳು (ಭಾಗ ೪೩೦) - ಅಪ್ಪ

ಸ್ಟೇಟಸ್ ಕತೆಗಳು (ಭಾಗ ೪೩೦) - ಅಪ್ಪ

ರೈಲು ಬಂಡಿ ಊರುಗಳನ್ನ ದಾಟಿಕೊಂಡು, ನಗರಗಳನ್ನು ಸುತ್ತಿಕೊಂಡು, ಹಳ್ಳಿ ತೋಟ ಗದ್ದೆ ಕಾಡುಗಳನ್ನು ದಾಟಿ ಇನ್ನೊಂದೂರಿಗೆ ಪಯಣ ಹೊರಟಿದೆ. ಅವಳಿಗೆ ಗೊತ್ತಿಲ್ಲ ಎಲ್ಲಿಗೆ ಹೋಗುತ್ತಿದ್ದೇನೆ ಅಂತ. ಆದರೆ ಅವಳಿಗೆ ಗೊತ್ತಿರುವ ಸತ್ಯ ಅಪ್ಪನ ಜೊತೆ ಇದ್ದೇನೆ ಅನ್ನೋದು ಮಾತ್ರ. ಅವಳಿಗೆ ಮತ್ಯಾವುದರ ಅರಿವೆಯೂ ಇಲ್ಲ. ಅದರ ಅಗತ್ಯವೂ ಇಲ್ಲ. ಯಾಕೆಂದರೆ ಜೊತೆಗೆ ಅಪ್ಪನೇ ಇದ್ದರಲ್ವಾ. ದಿನವೂ ಮನೆಯಿಂದ ಅಪ್ಪ ಚೀಲ ಹಿಡಿದು ಬೆಳಗ್ಗೆ ಹೊರಟವರು ಮತ್ತೆ ಸಂಜೆ ಬರ್ತಾ ಇದ್ರು. ಏನು ಕೆಲಸ ಮಾಡುತ್ತಾರೆ ಗೊತ್ತಿಲ್ಲ, ಆದರೆ ಪ್ರತಿದಿನ ಸಂಜೆ ಏನಾದರೊಂದು ತಿಂಡಿ ತರ್ತಾರೆ. ಪಕ್ಕದಲ್ಲಿ ಕುಳಿತು ಕಥೆ ಹೇಳ್ತಾರೆ, ಮುದ್ದು ಮಾಡುತ್ತಾರೆ. ಅದಕ್ಕಾಗಿ ಅಪ್ಪ ಅಂದ್ರೆ ತುಂಬಾ ಇಷ್ಟ. 

ಆ ದಿನ ಬೆಳಗ್ಗೆ ಅಮ್ಮ ಮನೇಲಿರಲಿಲ್ಲ, ಅಪ್ಪ ಯಾಕೋ ಮಂಕಾಗಿ ಕುಳಿತುಬಿಟ್ಟಿದ್ದರು. ಮನೆಗೆಲ್ಲಾ ತುಂಬ ಜನ ಬಂದು ಹೋಗೋರು, ಎಲ್ಲರೂ ಅಪ್ಪನ ಕೈ ಹಿಡಿದು ಸಮಾಧಾನ ಮಾಡ್ಕೋ ಅಂತ ಹೇಳ್ತಿದ್ರು. ಅಮ್ಮ ಏನಾದರೋ ಗೊತ್ತಿಲ್ಲ. ಅಪ್ಪನಲ್ಲಿ ಕೇಳೋದಕ್ಕೆ ನನಗೆ ಮಾತೇ ಬರುತ್ತಿಲ್ಲ .

ಈ ದಿನ ಚೀಲ ಹಿಡಿದು ಜೊತೆಗೆ ಬಾ ಮಗ ಅಂದುಕೊಂಡು ಕರೆದುಕೊಂಡು ಹೊರಟರು. ಮತ್ಯಾವ ಪ್ರಶ್ನೆಗಳನ್ನು ಇಲ್ಲಿಯವರೆಗೂ ಕೇಳಿಲ್ಲ. ಜೊತೆಗೆ ಹೊರಟೆ. ಮೊದಲ ಬಾರಿಗೆ ರೈಲು ಹತ್ತಿಸಿದರು. ಬಾಗಿಲ ಹತ್ತಿರ ಕೂರಿಸಿಕೊಂಡು ಹೊರಗಿನ ಪ್ರಪಂಚ ತೋರಿಸಿದರು. ಸೀಟು ಖಾಲಿ ಇತ್ತು, ನಾವ್ಯಾಕೆ ಸೀಟಲ್ಲಿ ಕೂರಲಾಗುತ್ತಿಲ್ಲ ಗೊತ್ತಿಲ್ಲ. ಅಪ್ಪನ ಬಳಿ ಕೂತಿದ್ದಾಗ ಹೊರಗಿನಿಂದ ಬೀಸೋ ಗಾಳಿ ತುಂಬಾ ಖುಷಿ ಕೊಡುತ್ತಿತ್ತು. ಅಪ್ಪನ ಕೈ ಹಿಡಿದು ನಾನು ಅಲ್ಲೇ ಕುಳಿತೆ. ಯಾವುದೋ ಒಂದು ಜಾಗದಲ್ಲಿ ಇಳಿದು ಅಲ್ಲಿಂದ ನಮ್ಮ ಮನೆಯ ಮನೆಗಿಂತ ಸಣ್ಣದಾದ ಇನ್ನೊಂದು ಮನೆಯೊಳಕ್ಕೆ ಬಂದು ನಾವಿನ್ನು ಇಲ್ಲೇ ಇರೋದು ಇಲ್ಲೇ ಹತ್ತಿರದ ಶಾಲೆಗೆ ಸೇರಿಸ್ತೇನೆ ಅಂದರು. ಆಗಬಹುದು ಅನ್ನುಸ್ತು ಯಾಕೆಂದರೆ ಜೊತೆಗಿದ್ದದ್ದು ಅಪ್ಪ ಅಲ್ವಾ?. ಮನೇಲಿ ಅಮ್ಮ ಮಾಡ್ತಾ ಇದ್ದ ಎಲ್ಲಾ ಕೆಲಸವನ್ನು ಈಗ ಅಪ್ಪ ಮಾಡೋದಕ್ಕೆ ಆರಂಭ ಮಾಡಿದ್ದಾರೆ. ಒಂದು ದಿನವೂ ಅಪ್ಪ ನನ್ನ ಬಿಟ್ಟಿರುವುದಿಲ್ಲ. ಈಗಲೂ ಅಪ್ಪ ಕೆಲಸಕ್ಕೆ ಹೋಗ್ತಾರೆ ಆದರೆ ಮನೆಯಿಂದ  ಚೀಲ ತೆಗೆದುಕೊಂಡು ಹೋಗ್ತಾ ಇಲ್ಲ. ಪ್ರತಿದಿನವೂ ಹಿಂದಿಗಿಂತ ಹೆಚ್ಚು ಸುಸ್ತಾದ ಹಾಗೆ ಕಾಣುತ್ತಿದ್ದಾರೆ. ಆದ್ರೂ ಅಪ್ಪ ಕಥೆ ಹೇಳುತ್ತಾರೆ, ಮುದ್ದು ಮಾಡ್ತಾರೆ. ನನಗೆ ಬದುಕಿನ ಬಗ್ಗೆ ಭಯ ಇಲ್ಲ ಯಾಕೆಂದರೆ ಜೊತೆಗೆ ಅಪ್ಪ ಇದ್ದಾರೆ ಅಲ್ವಾ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ