ಸ್ಟೇಟಸ್ ಕತೆಗಳು (ಭಾಗ ೪೩೩) - ಒಳಿತ್ಯಾವುದು?

ಸ್ಟೇಟಸ್ ಕತೆಗಳು (ಭಾಗ ೪೩೩) - ಒಳಿತ್ಯಾವುದು?

ಇವತ್ತು ಅಣ್ಣನ ಜೊತೆ ಬರುವಾಗ ಅಣ್ಣ ನನಗೆ ಏನು ಹೊಸ ವಿಚಾರವನ್ನು ಹೇಳಲೇ ಇಲ್ಲ. ನನಗೆ ಅನಿಸಿತು ಯಾವತ್ತೂ ಇಷ್ಟು ಮೌನವಾಗಿ ನನ್ನ ಮನೆ ತಲುಪಿಸಿದವರಲ್ಲ, ಇವತ್ತೇ ಯಾಕೆ ಮೌನವಾಗಿದ್ದಾರೆ ಅಂತ. ಆದ್ರೆ ಅವರ ಜೊತೆ ಬರುತ್ತಾ ಇರೋ ಹಾಗೆ ಆಗಿರೋ ಕೆಲವು ಘಟನೆಗಳೇ ಜೀವನದ ದೊಡ್ಡ ಪಾಠವನ್ನು ಹೇಳಿಕೊಟ್ಟು ಹೋಗಿದ್ದವು. ಬರುತ್ತಿರಬೇಕಾದರೆ ಹಲವಾರು ಗುಂಡಿಗಳನ್ನು ತಪ್ಪಿಸಿಕೊಂಡು ಮುಂದುವರಿಯುತ್ತಿದ್ದರು, ಕೆಲವೊಂದು ಕಡೆ  ಗುಂಡಿಗಳನ್ನು ತಪ್ಪಿಸದೇ ನೇರವಾಗಿ ಅದರೊಳಗೆ ಚಕ್ರವನ್ನು ಇಳಿಸಿ ಮತ್ತೆ ಮುಂದುವರಿಯುತ್ತಿದ್ದರು. ಪ್ರತಿಯೊಂದು ಗುಂಡಿಗಳನ್ನು ತಪ್ಪಿಸಿಕೊಂಡೆ ಮುಂದುವರಿಯುತ್ತಾ ಬಂದಿದ್ದರೆ ಎಲ್ಲೋ ಒಂದು ಕಡೆ ನಮ್ಮ ಬೈಕು  ಬಿದ್ದಿರಲೂಬಹುದು.  ಕೆಲವೊಂದು ಸಲ ಇಳಿಯುವ ಅನಿವಾರ್ಯತೆ ಹಾಗೆ ಇಳಿದು ಅಲ್ಲೇ ಉಳಿದುಬಿಡುವ ಮನೋಪ್ರವೃತ್ತಿ ಅಲ್ಲ. ಸಮಸ್ಯೆಗಳು ಎದುರಾಗುತ್ತವೆ ಸಮಸ್ಯೆಗಳಿಂದ ತಪ್ಪಿಸಿಕೊಂಡು ಗುರಿಯ ಕಡೆಗೆ ಹೋಗುವುದು ಅಥವಾ ಸಮಸ್ಯೆಗಳ ಒಳಗಿಳಿದು ಅದನ್ನ ಪರಿಹರಿಸಿ ಮೆಟ್ಟಿನಿಂತ ಮುಂದುವರಿಯಬಹುದು. ಸಮಸ್ಯೆಗಳಿಲ್ಲವಾದರೆ ಆ ಸಾಗಿದ ದಾರಿ ನೆನಪಿರುವುದಿಲ್ಲ. ಕೆಲವೊಂದು ಕಡೆ ನಿಧಾನವಾಗಿಯೂ ಮತ್ತೆ ವೇಗವಾಗಿಯೂ ಸಾಗಬೇಕು. ಒಂದೇ ವೇಗ, ಒಂದೇ ತರನಾದ ರಸ್ತೆ, ಏರು ತಗ್ಗು ತಿರುವುಗಳು ಇಲ್ಲದಿದ್ದರೆ ಪ್ರಯಾಣ ಮಾಡುವುದಕ್ಕೆ ಬೇಜಾರು ಆಗುವ ಹಾಗೆ ಜೀವನವೂ ಇದ್ದರೆ ಜೀವನವೇ ಬೇಡ ಅನ್ನಿಸಿಬಿಡಬಹುದು. ಏರು ತಗ್ಗುಗಳಿರಲಿ, ಹೊಂಡ ಗುಂಡಿಗಳು ಇರಲಿ ಸಾಗುವುದು ಮಾತ್ರ ನಿರಂತರವಾಗಿರಲಿ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ