ಸ್ಟೇಟಸ್ ಕತೆಗಳು (ಭಾಗ ೪೩೫) - ಹಕ್ಕಿಯ ಮಾತು

ಸ್ಟೇಟಸ್ ಕತೆಗಳು (ಭಾಗ ೪೩೫) - ಹಕ್ಕಿಯ ಮಾತು

ನಾವು ನಮ್ಮ ಮನೆಯನ್ನು ಕಳೆದುಕೊಂಡಿದ್ದೇವೆ. ಹಲವು ತಿಂಗಳ ಪರಿಶ್ರಮ, ಒಂದಷ್ಟು ಸಲ ಬಿದ್ದು ಮತ್ತೆ ಮತ್ತೆ ಕಷ್ಟಪಟ್ಟು ಕಟ್ಟಿದ ಮನೆ. ನನ್ನೊಬ್ಬನದಲ್ಲ ಇನ್ನು ಹಲವಾರು ಜನರ ಮನೆಯಿದೆ. ನಾವೆಲ್ಲ ಜೊತೆಗೆ ಬದುಕ್ತಾ ಇರೋರು. ನನ್ನ ಪಕ್ಕದ ಮನೆಯಲ್ಲಿ ಕೆಲವೇ ದಿನಗಳ ಹಿಂದೆ ಹುಟ್ಟಿದ ಪುಟ್ಟ ಎರಡು ಮಕ್ಕಳಿದ್ದಾರೆ. ನಾವೆಲ್ಲ ಆಗಾಗ ಜೊತೆಗೆ ಕುಳಿತು ಮಾತಾಡುತ್ತೇವೆ. ಸಿಕ್ಕಿರೋ ಬದುಕು ಎಷ್ಟು ಚೆನ್ನಾಗಿದೆ ಅಂತ ಸಂಭ್ರಮವನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿಗೆ ನಮ್ಮ ಮನೆ ಇರುವ ಜಾಗವನ್ನು ದೂರದಿಂದಲೇ ಒಂದಷ್ಟು ಜನ ನೋಡಿ ಹೋಗ್ತಾ ಇದ್ದಾರೆ. ನಮ್ಮ ಬಳಿ ಯಾವುದನ್ನು ಕೇಳಿಲ್ಲ. ನಿನ್ನೆ ಒಂದೇ ಕ್ಷಣ ಜೋರು ಕಂಪನ. ನಾನು ಮನೆಯಲ್ಲಿದ್ದೆ ಪಕ್ಕದ ಮನೆಯ ಮಕ್ಕಳು ಬೇರೆ ಯಾರು ಇಲ್ಲ. ಎಲ್ಲಾ ಕೆಲಸಕ್ಕೆ ಹೋಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಮರ ಅಲ್ಲಾಡುತ್ತಿದೆ. ಯಾಕೋ ಮನೆಯಿಂದ ಹೊರಬಂದು ನೋಡಿದರೆ ಯಾರು ನಮ್ಮ  ಮನೆ ನಿಂತಿರುವ ಮರವನ್ನು ಕಡಿಯುತ್ತಿದ್ದಾರೆ. ಬೇಡ ಬೇಡ ಅಂತ ಎಷ್ಟು ಜೋರು ಕಿರುಚಾಡಿದರೂ ಯಾರಿಗೂ ಕೇಳ್ತಾಯಿಲ್ಲ. ನಮ್ಮ ಮನೆಯ ಅಕ್ಕಪಕ್ಕದ ಮನೆಯವರೆಲ್ಲಾ ಮರದ ಸುತ್ತ ಬಂದರು. ಬೇಡಿ ಕಾಡಿ  ಕಾಲಿಗೆ ಬಿದ್ದರೂ ಯಾರೊಬ್ಬರಿಗೂ ಕೇಳಿಲ್ಲ. ದೊಡ್ಡ ಮೊಬೈಲ್ಗಳಲ್ಲಿ ಚಿತ್ರಗಳನ್ನು ತೆಗೆದು ಅದೆಲ್ಲಿಗೆ ಕಳುಹಿಸುವುದಕ್ಕೆ ಕಾಯುತ್ತಿದ್ದಾರೆ ಗೊತ್ತಿಲ್ಲ. ನೇರವಾಗಿ ನೆಲಕ್ಕೆ ಬಡಿದ ಆ ಮರ ಅದರೊಳಗೆ ಕುಳಿತಿದ್ದ ಪುಟ್ಟ ಮರಿಗಳು ಕ್ಷಣದಲ್ಲಿ... ಆ ಮಕ್ಕಳನ್ನು  ಉಳಿಸುವುದಕ್ಕೆ ಆಗಲಿಲ್ಲ. ಯಾರಿಗೂ ನಮ್ಮದೂ ಒಂದು ಜೀವ ಅನಿಸಲಿಲ್ಲ. ನಿಮಗೆ ಪ್ರತಿಭಟನೆ ಮಾಡುವುದಕ್ಕೆ ನಿಮ್ಮ ಜಾತಿಯವರು ನಿಮ್ಮ ಪಂಗಡದವರು ನಿಮ್ಮ ಊರಿನವರು ನಿಮಗೆ ಬೇಕಾದವರು ಸಿಕ್ತಾರೆ. ನಮ್ಮ ನೋವನ್ನ ಹೇಳಿಕೊಳ್ಳುವುದು ಯಾರತ್ರ .ನಮ್ಮ ಜೊತೆಗೆ ನಿಲ್ಲುವರು ಯಾರು?

ನಿಮಗೆ ನೀವು ಬದುಕಿದರೆ ಸಾಕು? ನಿಮಗೆ ಮನುಷ್ಯರು ಅಂತ ಹೆಸರು ಬೇರೆ ಇಟ್ಟುಬಿಟ್ಟಿದ್ದಾರೆ? ಅನುಭವಿಸುತ್ತೀರಾ? ನಮ್ಮ ಕಣ್ಣೀರಿನ ಶಾಪ ನಿಮಗೂ ತಟ್ಟುತ್ತೆ. ಒಂದು ದಿನ ಬರುತ್ತೆ ಅವತ್ತು ಕಾಡಿ ಬೇಡಿದರೂ ಯಾರು ನಿಮ್ ಜೊತೆಗೆ ನಿಲ್ಲೋದಿಲ್ಲ... ನೋಡ್ತಾಯಿರಿ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ